ADVERTISEMENT

ಭದ್ರಾ ಸಂತ್ರಸ್ತ ಗ್ರಾಮದ ಕೆರೆಗಳಿಗೆ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 9:17 IST
Last Updated 28 ಫೆಬ್ರುವರಿ 2018, 9:17 IST

ಅಜ್ಜಂಪುರ: ‘ಭದ್ರಾ ಮೇಲ್ದಂಡೆ ಯೋಜನೆಯ ಸಂತ್ರಸ್ತ ಗ್ರಾಮಗಳ ಕೆರೆಗಳಿಗೆ ಸೋಮವಾರ ಭದ್ರಾ ಜಲಾಶಯದಿಂದ ಉಬ್ರಾಣಿ-ಅಮೃತಾಪುರ ಏತ ನೀರಾವರಿ ಮೂಲಕ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ಬಿಡಲಾಯಿತು. ‘ಪಟ್ಟಣ ಸಮೀಪ ಸೊಕ್ಕೆ ಗ್ರಾಮದ ಕೆರೆಗೆ ಪೂರೈಕೆ ಆಗುತ್ತಿರುವ ನೀರನ್ನು ಮಂಗಳವಾರ ವೀಕ್ಷಿಸಿದ ಶಾಸಕ ಜಿ.ಎಚ್.ಶ್ರೀನಿವಾಸ್

ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆಯ ಸಂತ್ರಸ್ತ ಗ್ರಾಮಗಳ ಕೆರೆಗಳಿಗೆ ಭದ್ರಾ ನೀರು ಹರಿಯುತ್ತಿದೆ. ಇದು ಅಂತರ್ಜಲ ವೃದ್ಧಿಸಿ, ರೈತರ ಬದುಕನ್ನು ಹಸನಾಗಿಸಲಿದೆ’ ಎಂದರು.

‘ಕ್ಷೇತ್ರವನ್ನು ನೀರಾವರಿ ನೀರಾವರಿ ಯೋಜನೆಗೆ ತರಲು ಸತತ ಪ್ರಯತ್ನ ನಡೆಸಿದ್ದೆ. ಕಡತಗಳ ಹಿಂದೆ ಬಿದ್ದಿದೆ. ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಅನುದಾನ ಹಾಗೂ ನೀರು ಪೂರೈಕೆಗೆ ಅನುಮತಿ ನೀಡುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳ ಮನವೊಲಿಸಿದ್ದೆ. ಪರಿಣಾಮ ಪ್ರಸ್ತುತ ನೀರು ಹರಿಯುತ್ತಿದೆ. ನನ್ನ ಹೋರಾಟ ಮತ್ತು ಕೆಲಸಕ್ಕೆ ಪ್ರತಿಫಲ ಸಿಕ್ಕಾಂತಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಭದ್ರಾ ಮೇಲ್ದಂಡೆ ಹಣಕ್ಕಾಗಿ ನಡೆಯುತ್ತಿರುವ ಯೋಜನೆ. ಇದರಿಂದ ರಾಜಕಾರಣಿಗಳಿಗೆ ಲಾಭ, ಇಲ್ಲಿನ ರೈತರಿಗೆ ನಷ್ಟ. ನೀರು ಕೊಡುವುದಾಗಿ ಹೇಳೋದು ಕಣ್ಣೊರೆಸುವ ತಂತ್ರ ಎಂಬ ಮಾತುಗಳು ಕೇಳಿಬಂದಿದ್ದವು. ನೀರು ಹರಿಸುವಿಕೆ ಸಾಧ್ಯವಾಗದ ಮಾತು ಎಂದು ವಿಪಕ್ಷಗಳು ದೂರಿದ್ದರು. ನೀರಿನ ಮಿತಿ ನಿಗದಿಗೊಳಿಸದೇ ಇರುವುದರಿಂದ ಕೆರೆಗಳಿಗೆ ನೀರು ಹರಿಯುವುದಿಲ್ಲ ಎಂದು ರೈತ ಸಂಘದ ಪ್ರತಿನಿಧಿಗಳು ಭವಿಷ್ಯ ನುಡಿದಿದ್ದರು. ಆದರೆ ಎರಡು ದಿನಗಳಿಂದ ಕೆರೆಗಳಿಗೆ ನೀರು ಹರಿಯುತ್ತಿದೆ. ಇದು ವಿರೋಧ ಪಕ್ಷಗಳ ಎಲ್ಲ ಆರೋಪಗಳಿಗೆ ಉತ್ತರ’ ಎಂದು ತಿಳಿಸಿದರು.

ಭದ್ರಾ ನೀರು ಹರಿಸುವಿಕೆಗೆ ಜನವರಿ 31 ಕಡೆಯ ದಿನವಾಗಿತ್ತು. ಇಲ್ಲಿನ ಜನರ, ರೈತಾಪಿ ಕೃಷಿಕರ ಆಗ್ರಹದಂತೆ ನೀರು ಹರಿಸುವಿಕೆ ದಿನವನ್ನು ವಿಸ್ತರಿಸಿ, ಕೆರೆಗಳಿಗೆ ನೀರು ನೀಡಲಾಗುತ್ತಿದೆ. ಮುಂದಿನ ಜೂನ್ ತಿಂಗಳಿಂದ ಡಿಸೆಂಬರ್‌ವರೆಗೂ ಕೆರೆಗಳಿಗೆ ನೀರು ಹರಿಯುವಿಕೆಗೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಿಗೆ ನೀರು ಮರುಪೂರಣಗೊಳ್ಳಲಿದೆ ಭವಿಷ್ಯದಲ್ಲಿ ಜನ-ಜಾನುವಾರುಗಳ ನೀರಿನ ಬವಣೆ ಹಿಂಗುವುದು. ತೋಟಗಳೂ ಕಳೆಕಟ್ಟಲಿವೆ. ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದ ರೈತನಿಗೆ ಅಂತರ್ಜಲ ವೃದ್ಧಿ ಹೊಸ ಭರವಸೆ, ಆಸರೆ ಒದಗಿಸಲಿದೆ’ ಅಭಿಪ್ರಾಯಪಟ್ಟರು.

‘ಶಾಸಕನಾದ ಮೇಲೆ ಇಡೀ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದೇನೆ. ನೀರಾವರಿ-ರಸ್ತೆ ಅಭಿವೃದ್ಧಿ ಮಾಡಿದ್ದೇನೆ. ಯಾವುದೇ ಜಾತಿ-ಧರ್ಮ ನೋಡಿ ಕೆಲಸ ಮಾಡಿಲ್ಲ. ಬರುವ ಚುನಾವಣೆಯಲ್ಲಿ ನೀವೂ ಕೂಡಾ ಜಾತಿ ನೋಡಿ ಮತ ಹಾಕಬೇಡಿ. ಕೆಲಸ ಮಾಡಿದವರನ್ನು ಬೆಂಬಲಿಸಿ. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಚುನಾವಣೆಯಲ್ಲಿ ಆಶಿರ್ವದಿಸಿ’ ಎಂದು ಮನವಿ ಮಾಡಿದರು.

ಫೆಬ್ರುವರಿ ತಿಂಗಳ ಬಿರು ಬೇಸಿಗೆಯಲ್ಲಿ ನೀರು ತರುವುದು ಅಷ್ಟು ಸುಲಭದ ಮಾತಲ್ಲ. ಬಿರುಕು ಬಿಟ್ಟ ಭೂಮಿಯಲ್ಲಿನ ಕೆರೆಗಳಿಗೆ ಪ್ರಸ್ತುತ ನೀರು ಹರಿಯುತ್ತಿರುವುದು ಸಂತೋಷ ತಂದಿದೆ. ಕುಡಿಯಲು-ಬಳಸಲು ನೀರಿಗೆ ಹಾಹಾಕಾರ ಎದ್ದಿರುವಾಗ ಕೆರೆಯಲ್ಲಿ ನೀರು ಪೂರ್ಣಗೊಳ್ಳುತ್ತಿರುದು ನಮ್ಮ ಅದೃಷ್ಟ ಎನಿಸುತ್ತಿದೆ. ಬಾಯಾರಿದ ದನ-ಕರು-ಜಾನುವಾರುಗಳ ಹಾಗೂ ಪಕ್ಷಿಗಳ ದಾಹ ತೀರಿಸಲು ಕೆರೆಯ ನೀರು ಸಹಾಯಕ ಆಗಲಿದೆ’ ಎಂದು ರೈತ ತಿಪ್ಪೇಶಪ್ಪ ಹೇಳಿದರು.

ಬತ್ತಿದ ಕೊಳವೆ ಬಾವಿಯಿಂದಾಗಿ ನಳದಲ್ಲಿ ಬಾರದ ನೀರಿಗೆ ಕಾಯುತ್ತಿರುವ ಊರಿನ ಜನರು ಕೆರೆಯಿಂದ ನೀರು ಕೊಂಡೊಯ್ಯುತ್ತಿದ್ದಾರೆ. ನೂರಾರು ಮಹಿಳೆಯರು ಬಟ್ಟೆ ಸ್ವಚ್ಛಗೊಳಿಸುತ್ತಿದ್ದಾರೆ. ಕೆರೆಗೆ ನೀರು ತುಂಬಿಸಲು ಶ್ರಮಿಸಿರುವ ಶಾಸಕರ ಹಾಗೂ ಸರ್ಕಾರದ ಕಾರ್ಯ ಶ್ಲಾಘನೀಯ’ ಎಂದು ಕಲ್ಲುಶೆಟ್ಟಿಹಳ್ಳಿಯ ರೈತ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.