ADVERTISEMENT

ಭದ್ರೆ ಮಡಿಲಲ್ಲಿ ಸಂಪರ್ಕ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 7:05 IST
Last Updated 26 ಫೆಬ್ರುವರಿ 2011, 7:05 IST

ನರಸಿಂಹರಾಜಪುರ: ಸ್ವಾತಂತ್ರ್ಯ ಪೂರ್ವದಲ್ಲೇ ಇಂದಿನ ಆಧುನಿಕ ನಗರಗಳಲ್ಲಿರುವ ಅತ್ಯಾವಶ್ಯಕ ಮೂಲಸೌಕರ್ಯ ಹೊಂದಿದ್ದ ತಾಲ್ಲೂಕು ಕೇಂದ್ರ ಭದ್ರಾ ಅಣೆಕಟ್ಟೆಯ ನಿರ್ಮಾಣದಿಂದಾಗಿ ಈ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಯಿತು. ಭದ್ರಾ ಅಣೆಕಟ್ಟು ನಿರ್ಮಿಸದಿದ್ದರೆ ಶಿವಮೊಗ್ಗದಷ್ಟೇ ಎನ್.ಆರ್.ಪುರ ಅಭಿವೃದ್ಧಿ ಹೊಂದಿರುತ್ತಿತ್ತು ಎಂಬ ಮಾತು ಪಟ್ಟಣದಲ್ಲಿ ಜನ ಸಾಮಾನ್ಯರಲ್ಲಿ ಪದೇ ಪದೇ ಕೇಳಿಬರುತ್ತದೆ.

ಭದ್ರಾ ಅಣೆಕಟ್ಟು ನಿರ್ಮಾಣದಿಂದಾಗಿ ಜಿಲ್ಲಾ ಕೇಂದ್ರವೂ ಸೇರಿದಂತೆ ಅಕ್ಕ ಪಕ್ಕದ ಊರುಗಳು ಸಂಪರ್ಕ ಕಳೆದುಕೊಂಡು ಸುತ್ತುಬಳಸಿ ಹೋಗುವ ಸ್ಥಿತಿ ನಿರ್ಮಾಣವಾಯಿತು, ಆ ಕಾಲದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ಲೋಕಸಭಾ ಚುನಾವಣೆ ಎದುರಿಸಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರಿಗೆ ಚಿಕ್ಕಮಗಳೂರಿಗೆ ತಾಲ್ಲೂಕಿನ ಕೂಸಗಲ್ ಗ್ರಾಮದ ಮಾರ್ಗವಾಗಿ ತೆರಳುವ ರಸ್ತೆಯನ್ನು ಭದ್ರಾನದಿಗೆ ಸೇತುವೆ ನಿರ್ಮಿಸುವ ಮೂಲಕ ಅಭಿವೃದ್ಧಿ ಪಡಿಸಲು ಮನವಿ ಸಲ್ಲಿಸಿದ್ದರು. ನಂತರ ಈ ರಸ್ತೆಯ ಅಭಿವೃದ್ಧಿಗಾಗಿ 1978-79ರಲ್ಲಿ ರೂ 33.70 ಲಕ್ಷ ಬಿಡುಗಡೆ ಮಾಡಿತ್ತು.

ಆದರೆ ಇದರಲ್ಲಿರೂ. 22.50ಲಕ್ಷ ವೆಚ್ಚ ಮಾಡಲಾಗಿದ್ದು ಉಳಿಕೆ ಹಣ ವ್ಯಯವಾಗದೆ ಉಳಿದು ಹೋಯಿತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ರಸ್ತೆಯ ನಿರ್ಮಾಣದ ಪ್ರಯತ್ನದಲ್ಲಿ ಆಗಿನ ರಾಜಕಾರಣಿಗಳಾದ ಕೆ.ಎಂ.ವೀರಪ್ಪಗೌಡ, ಬೇಗಾನೆ ರಾಮಯ್ಯ, ಎಚ್.ಜಿ.ಗೋವಿಂದಗೌಡ, ಡಿ.ಬಿ.ಚಂದ್ರೇಗೌಡ ಪ್ರಯತ್ನ ಮಾಡಿದ್ದರು ಎಂದು ಜನ ನೆನಪಿಸಿಕೊಳ್ಳುತ್ತಾರೆ. ಆದರೆ ಈ ಎಲ್ಲಾ ಪ್ರಯತ್ನದ ನಡುವೆಯೂ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹಾಗೂ ಈ ರಸ್ತೆ ಹಾದು ಹೋಗುವ ಪ್ರದೇಶ ಹೆಬ್ಬೆ ಅಭಯಾರಣ್ಯ ವ್ಯಾಪ್ತಿಗೆ ಹೊಂದಿಕೊಂಡಿರುವುದರಿಂದ ಅರಣ್ಯ ಕಾಯ್ದೆ ತೊಡಕಾಗಬಹುದೆಂಬ ಪೂರ್ವಾಗ್ರಹ ಪೀಡಿತ ಆತಂಕವನ್ನು ತೋರಿಸಿ ಸರ್ಕಾರ ಈ ಕಾಮಗಾರಿಯ ಜವಾಬ್ದಾರಿಯಿಂದ ನುಣುಚಿಕೊಂಡಿತು.

ಪರಿಣಾಮ ತಾಲ್ಲೂಕಿನ ಜನರು ಜಿಲ್ಲಾ ಕೇಂದ್ರಕ್ಕೆ ಸರಿ ಸುಮಾರು 55 ಕಿಲೋಮೀಟರ್ ದೂರಕ್ಕೆ ಬದಲಾಗಿ 96 ಕಿ.ಮೀ. ದೂರ ಸುತ್ತುವರಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯಾದ್ಯಂತ ಪ್ರಮುಖ ಹೆದ್ದಾರಿಗಳು ಅಭಯಾರಣ್ಯದ ಮಧ್ಯ ಹಾದು ಹೋದ ನಿದರ್ಶನಗಳಿವೆ. ಇಲ್ಲಿ ಗಮನಿಸ ಬೇಕಾದ ಇನ್ನೊಂದು ಮುಖ್ಯವಾದ ಅಂಶವೆಂದರೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅನಾದಿ ಕಾಲದಿಂದಲೂ ಇರುವ ಕಚ್ಛಾರಸ್ತೆ. ಇದನ್ನು ಪಕ್ಕಾ ರಸ್ತೆಯಾಗಿ ಮಾರ್ಪಡಿಸುವುದು ಮಾತ್ರ ಉಳಿದಿದೆ. ಅಲ್ಲದೆ ಇದು ಈಗಾಗಲೇ ಇರುವ ರಸ್ತೆಯಾಗಿರುವುದರಿಂದ ಇದರ ದುರಸ್ತಿಗೆ ಅರಣ್ಯ ಕಾನೂನು ತೊಡಕಾಗುವುದಿಲ್ಲ ಎಂಬುದು ಸಂಬಂಧಪಟ್ಟ ಅಧಿಕಾರಿಗಳ ಮಾತಾಗಿದೆ.

ಈ ರಸ್ತೆ ನಿರ್ಮಾಣವಾದರೆ ಜಿಲ್ಲಾ ಕೇಂದ್ರಕ್ಕೆ 3.30ಗಂಟೆ ಬದಲಾಗಿ 1.30ಗಂಟೆಗೆ ತಲುಪಬಹುದು ಅಲ್ಲದೆ ರಾಜಧಾನಿ ಬೆಂಗಳೂರಿಗೆ ಅಕ್ಕ ಪಕ್ಕದ ಜಿಲ್ಲೆಗೂ ಹತ್ತಿರವಾಗಲಿದೆ. ಸಮಯ ಇಂಧನ ಉಳಿಯಲಿದೆ. ಈಗಾಗಲೇ ಇರುವ ರಸ್ತೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಹಾಗೂ ಮುಳುಗಡೆಯಿಂದ ಅಸ್ತಿತ್ವ ಕಳೆದು ಕೊಂಡಿರುವ ತಾಲ್ಲೂಕು ಕೇಂದ್ರ ಜೀವ ಪಡೆದು ಕೊಳ್ಳಲಿದೆ. ಈ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಎರೆಡು ವರ್ಷಗಳ ಹಿಂದೆ ಜಿ.ಪಂ.ಮಾಜಿ ಉಪಾಧ್ಯಕ್ಷ ಪಿ.ಜೆ.ಆಂಥೋನಿ ಪ್ರಯತ್ನಿಸಿದ್ದರು. ಅಲ್ಲದೆ ಆಗಿನ ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ಸಹ ಆಸಕ್ತಿ ಹೊಂದಿದ್ದರು ಆದರೆ ಅದು ಈಡೇರಲಿಲ್ಲ.

ಗುರುವಾರ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ತಾಲ್ಲೂಕಿನ ಮೂಲಕ ರಂಭಾಪುರಿ ಪೀಠಕ್ಕೆ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ರೂ. 35ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಮೀಪ ಮಾರ್ಗವಾದ ಹಳೇ ಚಿಕ್ಕಮಗಳೂರು ರಸ್ತೆಯ ಅಭಿವೃದ್ಧಿ ಯಿಂದಾಗುವ ಅನುಕೂಲದ ಬಗ್ಗೆ ಶಾಸಕರು ಮುಖ್ಯಮಂತ್ರಿ ಮನವರಿಕೆ ಮಾಡಲಿ ಎಂಬುದು ಸಾರ್ವಜನಿಕರ ಒತ್ತಾಯ.                                       
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.