ADVERTISEMENT

ಭಯೋತ್ಪಾದನೆ ನಿಗ್ರಹಕ್ಕೆ ಸಂಕಲ್ಪ ಮಾಡಿ

ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 5:51 IST
Last Updated 27 ಜನವರಿ 2016, 5:51 IST
ಚಿಕ್ಕಮಗಳೂರು ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಕವಾಯತು ತಂಡಗಳ ಪರಿವೀಕ್ಷಣೆ ನಡೆಸಿದರು.
ಚಿಕ್ಕಮಗಳೂರು ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಕವಾಯತು ತಂಡಗಳ ಪರಿವೀಕ್ಷಣೆ ನಡೆಸಿದರು.   

ಚಿಕ್ಕಮಗಳೂರು: ‘ಯುವಜನರು ದೇಶಪ್ರೇಮ ಬೆಳೆಸಿಕೊಳ್ಳುವ ಜತೆಗೆ ದೇಶದ ಏಕತೆ ಮತ್ತು ಸಮಗ್ರತೆ ಕಾಪಾ ಡಬೇಕು. ಜಾಗತಿಕ ಮಟ್ಟದಲ್ಲಿ ಭಾರತ ವನ್ನು ಸಾರ್ವಭೌಮ ರಾಷ್ಟ್ರವನ್ನಾಗಿಸ ಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಸಂಕಲ್ಪ ತೊಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಕರೆನೀಡಿದರು.

ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ನಡೆದ ಗಣರಾಜ್ಯೋ ತ್ಸವದದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಸಮಾಜವು ತಲೆ ತಗ್ಗಿಸುವಂತೆ ಮಾಡಿದೆ. ನೈತಿಕತೆಯ ನೆಲೆಗಟ್ಟಿನಲ್ಲಿ ಆಲೋಚಿಸಿ, ಇಂತಹ ಘಟನೆಗಳಿಗೆ ತಿಲಾಂಜಲಿ ನೀಡಿದಾಗ ಸಮಾಜದಲ್ಲಿ ಸ್ವಾಸ್ಥ್ಯ ನೆಲೆಸುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.

ದೇಶವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸ್ವತಂತ್ರ, ಬಲಿಷ್ಠ, ಭವ್ಯ ರಾಷ್ಟ್ರ ನಿರ್ಮಿಸುವ ಹಾಗೂ ರಾಷ್ಟ್ರಕ್ಕೆ ಉತ್ಕೃಷ್ಟ ಮತ್ತು ಸರ್ವಶ್ರೇಷ್ಠ ಸಂವಿಧಾನ ನೀಡುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿ   ದಂತೆ ರಾಷ್ಟ್ರದ ಅಗ್ರಗಣ್ಯರು ಶ್ರಮಿಸಿ ದ್ದಾರೆ. ಭೌಗೋಳಿಕ, ಆರ್ಥಿಕ, ಸಾಮಾ ಜಿಕ ಪರಿಕಲ್ಪನೆಯ ಅಡಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸಿ ಕೊಡುವ ಆಶಯ ದೊಂದಿಗೆ ಸಂವಿಧಾನ ರೂಪು ಗೊಂಡಿದೆ. ನಮ್ಮ ಸಂವಿಧಾನ ವನ್ನು ಒಮ್ಮತದಿಂದ ಅಂಗೀಕರಿಸಿ ಗಣರಾಜ್ಯ ವಾಗಿ ಇಂದಿಗೆ ಆರೂವರೆ ದಶಕವಾಗಿದೆ. ಗಣರಾಜ್ಯೋತ್ಸವದ ನಮ್ಮ ಆಶಯಗಳು ಫಲ ನೀಡಿವೆಯೇ? ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕಾದ ಅಗ ತ್ಯವೂ ಇದೆ’ ಎಂದು ಅಭಿಪ್ರಾಯಪಟ್ಟರು.

‘ತನ್ನ ಹಕ್ಕು ಮತ್ತು ಕರ್ತವ್ಯಗಳನ್ನು ಮನನ ಮಾಡಿಕೊಳ್ಳಲು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದು ಸುದಿನ. ಉನ್ನತ ಪ್ರಜಾಪ್ರಭುತ್ವ ಆಶಯದ ನಮ್ಮ ಸಂವಿಧಾನ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ, ಮತದಾನ ಪದ್ಧತಿ, ಲಿಂಗ, ಭಾಷೆ, ಧರ್ಮ, ಜನಾಂಗ, ಜನ್ಮ ಸ್ಥಳ ಯಾವುದೇ ಬೇಧ-ಭಾವ ಇಲ್ಲದೆ ಸಮಾನ ಸ್ವಾತಂತ್ರ್ಯ ಮತ್ತು ಸಮಾನ ಹಕ್ಕು ಕೊಟ್ಟಿದೆ’ ಎಂದು ಬಣ್ಣಿಸಿದರು. 

‘ಸಮಾಜದ ಎಲ್ಲ ಬಡ ಜನತೆಯನ್ನು ಆರ್ಥಿಕವಾಗಿ ಮುಂದೆ ತರುವುದರ ಜತೆಗೆ ಎರಡು ಹೊತ್ತಿನ ಊಟ ಮತ್ತು ದುಡಿಯುವ ಕೈಗಳಿಗೆ ಕೆಲಸ ಕಲ್ಪಿಸಿದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವದ ಫಲ ದೊರೆತಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರ ಕಳೆದ 65 ವರ್ಷಗಳಿಂದ ಹೆಜ್ಜೆ ಹಾಕುವುದರ ಮೂಲಕ ಸಾಕಷ್ಟು ಪ್ರಗತಿಯ ಹಾದಿ ಕ್ರಮಿಸಿದೆ’ ಎಂದರು.

‘ಈ ಜಿಲ್ಲೆಯ ಬಗ್ಗೆ ನನಗೆ ಪ್ರೀತಿ, ಗೌರವ ಇದೆ. ಜಿಲ್ಲೆ ಸ್ವಾಭಾವಿಕ ಪ್ರಕೃತಿ ಸೊಗಡಿನಿಂದ ಕೂಡಿದ್ದರೂ ಜಿಲ್ಲೆಯಲ್ಲಿ ಹಲವಾರು ಸೂಕ್ಷ್ಮ ಸಮಸ್ಯೆಗಳು ನನ್ನ ಅರಿವಿಗೆ ಬಂದಿವೆ. ಬುದ್ದಿ ಜೀವಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಲಹೆ ಮತ್ತು ಸಹಕಾರದಿಂದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಸಚಿವರು ಹೇಳಿದರು.

ಇದಕ್ಕೂ ಮೊದಲು ಜಿಲ್ಲಾ ಉಸ್ತು ವಾರಿ ಸಚಿವರು ತೆರೆದ ಜೀಪಿನಲ್ಲಿ ಕವಾ ಯತು ತಂಡಗಳ ಪರಿವೀಕ್ಷಣೆ ನಡೆಸಿ, ಗೌರವ ರಕ್ಷೆ ಸ್ವೀಕರಿಸಿದರು. ನಾಗರಿಕ ಪೊಲೀಸ್‌ ಮತ್ತು ಜಿಲ್ಲಾ ಸಶಸ್ತ್ರ ಪೊಲೀಸ್‌ ಪಡೆ, ಗೃಹರಕ್ಷಕ ದಳ, ಮಾಜಿ ಸೈನಿಕರು, ಗೃಹರಕ್ಷಕ ದಳ, ವಿವಿಧ ಶಾಲಾ, ಕಾಲೇಜುಗಳ ಎನ್‌ಸಿಸಿ ಕೆಡೆಟ್ಸ್‌, ಭಾರತ ಸೇವಾದಳ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಆಶಾಕಿರಣ ಅಂಧಮಕ್ಕಳ ಶಾಲೆ ವಿದ್ಯಾ ರ್ಥಿಗಳು ಆಕರ್ಷಕ ಪರೇಡ್‌ ನಡೆಸಿದರು. ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿ ಗಳು ದೇಶ ಭಕ್ತಿ ಗೀತೆಗಳಿಗೆ ಪ್ರಸ್ತುತ ಪಡಿಸಿದ ಸಮೂಹ ನೃತ್ಯ ಪ್ರೇಕ್ಷಕರಿಗೆ ಮುದ ನೀಡಿತು.

ಶಾಸಕರಾದ ಸಿ.ಟಿ.ರವಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ನಿಗಮ ಮಂಡಳಿ ಅಧ್ಯಕ್ಷರಾದ ಕಡೂರು ಸಿ.ನಂಜಪ್ಪ, ಬಿ.ಸಿ.ಗೀತಾ, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಕವಿತಾ ಬೆಳ್ಳಿ ಪ್ರಕಾಶ್‌, ನಗರಸಭೆ ಅಧ್ಯಕ್ಷ ಮುತ್ತಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಧರ್ಮಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಎಸ್‌. ಚಂದ್ರೇಗೌಡ, ಜಿಲ್ಲಾಧಿ ಕಾರಿ ಎಸ್‌.ಪಿ. ಷಡಾಕ್ಷರಿಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್‌ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್‌.ರಾಗಪ್ರಿಯಾ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಇದ್ದರು.

ಗಣರಾಜ್ಯೋತ್ಸವ ಆಚರಣೆಯ ಸಂಭ್ರಮ ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರು ಕ್ರೀಡಾಂಗಣದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದರು.

ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರ ವಿವರ
2015–16ನೇ ಸಾಲಿನ ಜಿಲ್ಲಾವಾರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಾಲ್ಯಾನಾಯ್ಕ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಸೀತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ರಿಯಾಸ್ ಅಹಮ್ಮದ್, ಕೊಪ್ಪ ತಾಲ್ಲೂಕಿನ ಭುವನಕೋಟೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಜಿ.ಚೇತನ್, ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಎಸ್.ರಾಘವೇಂದ್ರ ಸ್ವಾಮಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಬೆರಳಚ್ಚುಗಾರರಾದ ಸುರೇಶ ದೀಕ್ಷಿತ್ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪರೇಡ್‌ ವಿಜೇತರು
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಆಕರ್ಷಕ ಪರೇಡ್‌ ನಡೆಸಿದ ಆಶಾ ಕಿರಣ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು  ಪ್ರಥಮ ಬಹುಮಾನ ಗಿಟ್ಟಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸೇವಾದಳ ತಂಡಕ್ಕೆ ದ್ವಿತೀಯ ಬಹುಮಾನ, ಮೌಂಟೇನ್ ವ್ಯೂ ಪ್ರೌಢಶಾಲೆ ಎನ್.ಸಿ.ಸಿ. ಕೆಡೆಟ್ಸ್‌ಗಳಿಗೆ ತೃತೀಯ ಬಹುಮಾನ ಮತ್ತು ಸಂತ ಜೋಸೆಫರ ಪ್ರೌಢಶಾಲೆ ಗೈಡ್ಸ್ ತಂಡಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು. ಐ.ಡಿ.ಎಸ್.ಜಿ ಕಾಲೇಜಿನ ಎನ್.ಸಿ.ಸಿ ತಂಡಕ್ಕೆ ಸೀನಿಯರ್ ಎನ್.ಸಿ.ಸಿ ಉತ್ತಮ ತುಕಡಿ ಬಹುಮಾನ ಲಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT