ADVERTISEMENT

ಭ್ರಷ್ಟಾಚಾರದ ವಿರುದ್ಧ ಜೆಡಿಎಸ್‌ ಹೋರಾಟ

ರಾಜ್ಯ ಘಟಕದ ಉಪಾಧ್ಯಕ್ಷ ಎಚ್,ಟಿ.ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 8:27 IST
Last Updated 2 ಏಪ್ರಿಲ್ 2018, 8:27 IST

ಶೆಟ್ಟಿಕೊಪ್ಪ(ಎನ್.ಆರ್.ಪುರ): ಜೆಡಿಎಸ್ ಮಾತ್ರ ರೈತರ, ಜನ ಸಾಮಾನ್ಯರ, ಕೂಲಿ ಕಾರ್ಮಿಕರ ಪಕ್ಷವಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾ ಧ್ಯಕ್ಷ ಎಚ್.ಟಿ.ರಾಜೇಂದ್ರ ತಿಳಿಸಿದರು.ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ಭಾನುವಾರ ಜೆಡಿಎಸ್‌ನಿಂದ ಹಮ್ಮಿ ಕೊಂಡಿದ್ದ ‘ಮನೆಮನೆಗೆ ಕುಮಾರಣ್ಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಜನಪರ ಕಾಳಜಿವುಳ್ಳ ವ್ಯಕ್ತಿಯಾಗಿದ್ದು, ಇಳಿವಯಸ್ಸಿನಲ್ಲೂ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಶೃಂಗೇರಿ ಕ್ಷೇತ್ರದ ಹಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜೆಡಿಎಸ್ ಸಮರ್ಥವಾಗಿದ್ದು, ಪಕ್ಷದ ಅಭ್ಯರ್ಥಿ ಎಚ್.ಟಿ.ವೆಂಕಟೇಶ್ ಗೆಲುವು ಅನಿವಾರ್ಯ. ಕ್ಷೇತ್ರದ ಜನತೆ ಈ ಬಾರಿ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಎಚ್.ಜಿ.ವೆಂಕಟೇಶ್ ಮಾತನಾಡಿ, ‘ಈ ಹಿಂದೆ ತಮ್ಮ ತಂದೆ ಎಚ್.ಜಿ.ಗೋವಿಂದೇಗೌಡರ ಕಾಲದ ಆಡಳಿತ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದಿದ್ದು, ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಪರಿಹಾರವಾಗದೆ ಹಾಗೆಯೇ ಉಳಿದಿದೆ. ಇವುಗಳಿಗೆ ಶಾಶ್ವತ ಪರಿಹಾರ ಬೇಕಾಗಿದ್ದು, ಕ್ಷೇತ್ರದ ಜನ ಈ ಬಾರಿ ಜೆಡಿಎಸ್ ಬೆಂಬಲಿಸುವ ಮೂಲಕ ತಮ್ಮ ಗೆಲುವಿಗೆ ಸಹಕರಿಸಬೇಕು ಎಂದರು.

ಜೆಡಿಎಸ್ ಮುಖಂಡ ಡಿ.ಸಿ.ದಿವಾಕರ್ ಮಾತನಾಡಿ, ‘ಕೇಂದ್ರದ ಬಿಜೆಪಿ ಸರ್ಕಾರ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬಂಡ ವಾಳಶಾಹಿಗಳ ಪರವಾಗಿದ್ದು, ಇದರಿಂದ ರಾಜ್ಯದ ರೈತರು, ಬಡವರು, ಕೂಲಿ ಕಾರ್ಮಿಕರು ಅತಂತ್ರವಾಗಿದ್ದು, ಅವರ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ’ ಎಂದು ದೂರಿದರು.‘ಕಾಂಗ್ರೆಸ್ ಹಾಗೂ ಬಿಜೆಪಿ ಜಾತಿ, ಧರ್ಮವನ್ನು ರಾಜಕಾರಣಕ್ಕೆ ಎಳೆದು ತಂದು ಕೋಮು ಸಾಮರಸ್ಯವನ್ನು ಹಾಳು ಮಾಡಿದ್ದು,  ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿವೆ’ ಎಂದರು.

ADVERTISEMENT

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಂ.ಚಂದ್ರಶೇಖರ್, ಶೃಂಗೇರಿ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ದಿವಾಕರ್ ಭಟ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಕೆ.ವಿ.ವಸಂತ್‌ ಕುಮಾರ್, ಮುಖಂಡರಾದ ಎಸ್‌.ಎಸ್.ಶಾಂತಕುಮಾರ್, ಕೆ.ಎನ್‌.ಶಿವದಾಸ್, ಶರತ್ ಡಿ.ಕಲ್ಲೆ, ಕಣಿವೆ ವಿನಯ್, ಎಂ.ಓ.ಜೋಯಿ, ಬಿ.ಕೆ.ಜಾನಕೀರಾಂ. ಎ.ಎಸ್‌.ಮಂಜುನಾಥ್‌, ಜೆ.ಟಿ.ಸುರೇಂದ್ರ, ಎಂ.ಮಹೇಶ್ ಪಾಲ್ಗೊಂಡಿದ್ದರು.ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ ಶೆಟ್ಟಿಕೊಪ್ಪ, ಜನತಾ ಕಾಲೋನಿ, ನವಗ್ರಾಮ ಬಡಾವಣೆ, ಕಡಹಿನಬೈಲು ಗ್ರಾಮದಲ್ಲಿ ನಡೆಯಿತು.

**

ರಾಜ್ಯಕ್ಕೆ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ಸರ್ಕಾರದ ಅವಶ್ಯಕತೆ ಇದ್ದು, ಅದಕ್ಕಾಗಿ ರಾಜ್ಯದ ಜನತೆ ಜೆಡಿಎಸ್‌ ಅನ್ನು ಬೆಂಬಲಿಸ‌ಬೇಕು – ಎಚ್.ಟಿ.ರಾಜೇಂದ್ರ, ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.