ADVERTISEMENT

ಮರ ಕಡಿತ: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 8:00 IST
Last Updated 10 ಅಕ್ಟೋಬರ್ 2012, 8:00 IST

ಅಜ್ಜಂಪುರ: ಸಸಿ ನೆಟ್ಟು, ಪರಿಸರ ಕಾಳಜಿ ವಹಿಸುವ ಜೊತೆಗೆ ಪಟ್ಟಣವನ್ನು ಸುಂದರಗೊಳಿಸುವ ಸಂಕಲ್ಪಮಾಡಿ, ಕಾರ್ಯೊನ್ಮುಖವಾಗಬೇಕಿದ್ದ ಪಟ್ಟಣದ ಗ್ರಾಮ ಪಂಚಾಯತಿ ಕಳೆದೆರಡು ದಿನಗಳ ಹಿಂದೆ ಟಿ.ಬಿ.ರಸ್ತೆಯಲ್ಲಿನ ಮರಗಳನ್ನು ನೆಲಕ್ಕುರುಳಿಸಿರುವುದು ಪರಿಸರ ಪ್ರೇಮಿಗಳ ಹಾಗೂ ಸಾರ್ವ ಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯತಿ ಆಡಳಿತ ವರ್ಗ ಹಾಗೂ ಅಧಿಕಾರಿಗಳು ವಿಶ್ವಪರಿಸರ ದಿನ,  ಹಸಿರು ವರ್ಷ, ವನಮಹೋತ್ಸವದಂತಹ ಪರಿಸರ ದಿನಾಚಾರಣೆಗಳನ್ನು  ವೇದಿಕೆಗಳಿಗೆ ಹಾಗೂ ಕಡತಗಳಿಗೆ ಮೀಸಲಿಟ್ಟು, ವಾಸ್ತವದಲ್ಲಿ ಪಟ್ಟಣದ ಟಿ.ಬಿ.ರಸ್ತೆಯ ಎರಡು ಬದಿಗಳಲ್ಲಿ ಬೆಳೆದಿದ್ದ ಮೇಟ್ರಿ ಜಾತಿಗೆ ಸೇರಿದ  6 ಮರಗಳನ್ನು  ಕಡಿದು ಹಾಕಿದ್ದು ಎಷ್ಟು ಸರಿ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

  ಪ್ರಭಾವಿಗಳ ಒತ್ತಡಕ್ಕೆ  ಮಣಿದು ಹಾಗೂ ಟಿ.ಬಿ.ರಸ್ತೆಯಲ್ಲಿ ಹೊಸದಾಗಿ ತಲೆಎತ್ತಿರುವ ಅಂಗಡಿಮುಂಗಟ್ಟುಗಳು  ಮರದ  ಮರೆಯಲ್ಲಿ ಗ್ರಾಹಕರನ್ನು ಆಕರ್ಶಿಸಲು ತೊಂದರೆಯಾಗುತ್ತದೆ ಎಂಬ ದುರುದ್ದೇಶದಿಂದ ಗ್ರಾಮ ಪಂಚಾ ಯತಿಯು ಬೆಳೆದು ನಿಂತ ಮರಗಳನ್ನು ಕತ್ತರಿಸಿದೆ ಎಂದು ಗ್ರಾ.ಪಂ.ಸದಸ್ಯ ಎ.ಸಿ.ಚಂದ್ರಪ್ಪ ಆರೋಪಿಸಿದ್ದಾರೆ.

ಮರಗಳ ಬೇರು ಮನೆ ತಳಪಾಯಕ್ಕೆ ಸಾಗಿ ಕಟ್ಟಡದ ಬಿರುಕಿಗೆ ಕಾರಣ ವಾಗಿದೆ,  ನೀರಿನ ಪೈಪ್‌ಲೈನ್ ಹಾಳಾಗಿವೆ, ರಂಬೆಗಳು  ಚಾಚಿರುವು ದರಿಂದ ಮನೆಗೆ ಕಲ್ಪಿಸಿರುವ ವಿದ್ಯುತ್ ತಂತಿಯಿಂದ ಅಪಾಯವೊದಗುತ್ತದೆ ಎಂಬ ಸಾರ್ವಜನಿಕರ ದೂರಿಗೆ ಸ್ಪಂದಿಸಿ, ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡ ನಂತರವಷ್ಟೇ ಅನಿವಾರ್ಯವಾಗಿ ಮರ ಕಡಿಯಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ  ಅವರು ಸ್ಪಷ್ಟಪಡಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.