ADVERTISEMENT

ರತ್ನಗಿರಿ ಬೋರೆ ರಸ್ತೆ: ಸಂಚಾರಕ್ಕೆ ಸವಾಲು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 8:20 IST
Last Updated 7 ಮಾರ್ಚ್ 2011, 8:20 IST

ಚಿಕ್ಕಮಗಳೂರು: ರತ್ನಗಿರಿ ಬೋರೆಯ ಪ್ರತಿಷ್ಠಿತ ಮಹಾತ್ಮಗಾಂಧಿ ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನೆಲೆ, ಸಂಚಾರ ಪೊಲೀಸ್ ಠಾಣೆ, ಡಿವೈಎಸ್‌ಪಿ ಕಚೇರಿ, ಕುಡಿಯುವ ಸಂಸ್ಕರಣಾ ಕೇಂದ್ರ ಲಾಲ್‌ಬಹದ್ದೂರ್‌ಶಾಸ್ತ್ರಿ ಶಾಲೆ ಮತ್ತು ಕಾಲೇಜು ಇವೆ.
ಡಾಂಬರು ಕಂಡು ದಶಕಗಳೇ ಕಳೆದಿರುವ ಈ ರಸ್ತೆಯ ತುಂಬಾ ಗುಂಡಿಗಳು ಬಿದ್ದಿವೆ. ನೀರು ಶುದ್ಧೀಕರಣ ಘಟಕದಿಂದ ನಗರದ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಕೊಂಡೊಯ್ಯುವ ನಗರಸಭೆ ಟ್ರ್ಯಾಕ್ಟರ್‌ಗಳು ಓಲಾಡುತ್ತಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಏಕೈಕ ಉತ್ತಮ ಪಾರ್ಕ್ ಆಗಿರುವ ರತ್ನಗಿರಿ ಬೋರೆಗೆ ಅನೇಕ ಹಿರಿಯ ನಾಗರಿಕರು ಪ್ರತಿ ಮುಂಜಾನೆ ಮತ್ತು ಮುಸ್ಸಂಜೆ ವಾಕಿಂಗ್‌ಗಾಗಿ ಬರುತ್ತಾರೆ. ಈ ರಸ್ತೆಯಲ್ಲಿ ಬೀದಿದೀಪದ ಸೌಲಭ್ಯ ಸಹ ಇಲ್ಲ. ಹೀಗಾಗಿ ಅವರೆಲ್ಲಾ ಜೀವ ಕೈಲಿ ಹಿಡಿದು ನಡೆದಾಡಬೇಕಾಗಿದೆ.ಟ್ರಾಫಿಕ್ ಪೊಲೀಸ್ ಠಾಣೆ ಮತ್ತು ಡಿವೈಎಸ್‌ಪಿ ಕಚೇರಿಗೆ ವಿವಿಧ ಕೆಲಸಗಳಿಗಾಗಿ ಭೇಟಿ ನೀಡುವ ನಾಗರೀಕರು, ರಸ್ತೆ ದುಸ್ಥಿತಿಯನ್ನು ಕಂಡು ನಗರಸಭೆಗೆ ಹಿಡಿಶಾಪ ಹಾಕುತ್ತಾರೆ.

ಶಾಸಕ ಸಿ.ಟಿ.ರವಿ, ನಗರಸಭೆಯ ಹಲವು ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿದಿನ ಇದೇ ಮಾರ್ಗದಲ್ಲಿ ಸಂಚರಿಸಿದರೂ ಯಾರೊಬ್ಬರಿಗೂ ರಸ್ತೆಯ ದುಸ್ಥಿತಿ ಅರಿವಾಗದಿರುವುದು ಸೋಜಿಗ ಎನ್ನುತ್ತಾರೆ ರಾಮನಹಳ್ಳಿ ರಸ್ತೆಯ ನಿವಾಸಿ ಶಂಕರ್.ವಾಕಿಂಗ್‌ಗೆ ಬಂದ್ರೆ ಆರೋಗ್ಯ ಚೆನ್ನಾಗಿ ಆಗುತ್ತೆ ಅಂತಾರೆ. ಆದರೆ ಈ ರಸ್ತೆಯಲ್ಲಿ ನಡೆದಾಡಲೂ ಭಯವಾಗುತ್ತೆ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ವಾಹನ ಸವಾರರು ನಮ್ಮ ಜೀವವನ್ನೇ ತೆಗೆದುಬಿಟ್ಟಾರು ಎಂಬ ಭಯ ಕಾಡುತ್ತದೆ. ಬೋರೆಯಲ್ಲಿ ವಾಕಿಂಗ್ ಮುಗಿಯುವುದು ತಡವಾದರೆ ಈ ರಸ್ತೆಯ ಕತ್ತಲು ಭಯ ಹುಟ್ಟಿಸುತ್ತೆ. ನಗರಸಭೆ ಕನಿಷ್ಠಪಕ್ಷ ಬೀದಿ ದೀಪವಾದರೂ ಹಾಕಿಸಬೇಕು ಎಂದು ಒತ್ತಾಯಿಸುತ್ತಾರೆ ಹಿರಿಯ ನಾಗರೀಕರಾದ ರತ್ನಮ್ಮ. ಈ ರಸ್ತೆಗೆ ಹೊಸಬರು ಗಾಡಿ ತಂದರೆ ಗುಂಡಿಗೆ ಬೀಳೋದು ಗ್ಯಾರೆಂಟಿ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ಗಾಡಿ ಓಡಿಸೋದು ದುಸ್ವಪ್ನವೇ ಸರಿ ಎನ್ನುತ್ತಾರೆ ನರೇಶ್.

ಆಶಾ ಕಿರಣ ಅಂಧ ಮಕ್ಕಳ ಶಾಲೆ, ರಾಮನಹಳ್ಳಿ, ಕೆಂಪನಹಳ್ಳಿ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ದುರಸ್ತಿಗೆ ನಗರಸಭೆ ಹಾಗೂ ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು ಎಂಬ ಒತ್ತಾಯ ನಾಗರಿಕರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.