ADVERTISEMENT

ರಸ್ತೆ ಬಳಕೆಗೆ ಅಡ್ಡಿ, ಗ್ರಾಮಸ್ಥರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 9:22 IST
Last Updated 22 ಜುಲೈ 2013, 9:22 IST

ಮೂಡಿಗೆರೆ: ನಾಲ್ಕು ಗ್ರಾಮಗಳ ಜನರು ಬಳಸುತ್ತಿದ್ದ ರಸ್ತೆಯನ್ನು, ಸ್ಥಳೀಯ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ಕಳೆದ ಕೆಲವು ದಿನಗಳಿಂದ ಗೇಟಿಗೆ ಬೀಗ ಹಾಕುವ ಮೂಲಕ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವುದನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಸಿ, ಕಂದಾಯ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಬೀಗ ತೆರವುಗೊಳಿಸಿದ ಘಟನೆ ನಡೆದಿದೆ.

ತಾಲ್ಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಉಪ ಗ್ರಾಮಗಳಾದ ಅರೆಕೂಡಿಗೆ, ಮಕ್ಕಿಮನೆ, ಹೆಡ್ದಾಳ್, ಬಪ್ಲಿಕೆ ಮುಂತಾದ ಗ್ರಾಮಗಳಿಗೆ ಕಲ್ಮನೆ ರಸ್ತೆಯ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸ್ಥಳೀಯ ಕಾಫಿ ಎಸ್ಟೇಟ್ ಒಂದರ ಮಾಲೀಕರಾದ ಅವಿನಾಶ್ ಎಂಬುವವರು ಕಳೆದ ಕೆಲವು ದಿನಗಳಿಂದ ಗೇಟಿಗೆ ಬೀಗ ಹಾಕುವ ಮೂಲಕ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದರು.

ಇದರಿಂದಾಗಿ ಈ ನಾಲ್ಕೂ ಗ್ರಾಮದ ಜನತೆ ಗ್ರಾಮದಿಂದ ಬೇರೆ ಸ್ಥಳಗಳಿಗೆ ತೆರಳಲಾಗದೇ ದಿದ್ಬಂಧನ ವಿಧಿಸಿದಂತಾಗಿತ್ತು. ಇದನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಲಾಯಿತು ಎಂದು ಪ್ರತಿಭಟನೆಯಲ್ಲಿದ್ದ ಗ್ರಾಮಸ್ಥರು ತಿಳಿಸಿದರು.

ವಿಚಾರ ತಿಳಿದ ಕಂದಾಯ ಉಪವಿಭಾಗಾಧಿಕಾರಿ ಡಾ.ಪ್ರಶಾಂತ್, ತಹಶೀಲ್ದಾರ್ ಎ.ವಿ.ರುದ್ರಪ್ಪಾಜಿ ರಾವ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಗೇಟಿಗೆ ಹಾಕಲಾಗಿದ್ದ ಬೀಗವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಭಾರತ ಕಮ್ಯುನಿಸ್ಟ್ ಪಕ್ಷದ ಬಿ.ಕೆ.ಲಕ್ಷ್ಮಣ್ ಕುಮಾರ್, ಎಚ್.ಟಿ.ರವಿಕುಮಾರ್, ನಿಡುವಾಳೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಕ್ಯಾಂಡಿಪಿಂಟೋ, ಗ್ರಾಮಸ್ಥರಾದ ಸೋಮೇಶ್, ಅರುಣ್‌ಕುಮಾರ್, ರಮೇಶ್ ಮತ್ತು ವಿವಿಧ ಮಹಿಳಾ ಸಂಘಟನೆಯ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.