ADVERTISEMENT

ರಾಚೋಟೇಶ್ವರ ಶ್ರೀಗೆ ರೇಣುಕಾಚಾರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 5:55 IST
Last Updated 16 ಫೆಬ್ರುವರಿ 2012, 5:55 IST

ಕಡೂರು: ಬಾಳೆಹೊನ್ನೂರು ರಂಭಾಪುರಿ ಪೀಠ ಪ್ರತಿವರ್ಷ ನೀಡುವ `ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ~ಯನ್ನು ಈ ಬಾರಿ ಗುಲ್ಬರ್ಗ ತಾಲ್ಲೂಕು ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಶತಾಯುಷಿ ಕರಿಬಸವೇಶ್ವರ ಶಿವಾಚಾರ್ಯ ಅವರಿಗೆ ಮಾರ್ಚ್ 6 ರಂದು ನಡೆಯುವ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಂದರ್ಭ ಪ್ರದಾನ ಮಾಡಲಾಗುವುದು ಎಂದು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕಡೂರು -ಬೀರೂರು ಪಟ್ಟಣಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬುಧವಾರ ಆಗಮಿಸಿದ್ದ ಸ್ವಾಮೀಜಿ ರಂಭಾಪುರಿ ಶಾಖಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ವಿವರ ನೀಡಿದರು.

ಈ ವರ್ಷ ಆಯುರ್ವೇದ, ಧಾರ್ಮಿಕ, ಶಿಕ್ಷಣದಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು. 1912 ರಲ್ಲಿ ಜನಿಸಿದ ಕರಿಬಸವೇಶ್ವರ ಶಿವಾಚಾರ್ಯರು ಶತಾಯುಷಿಗಳಾಗಿದ್ದು ವೈದಿಕ, ಜ್ಯೋತಿಷ, ಸಂಸ್ಕೃತಿ, ವ್ಯಾಕರಣ, ತರ್ಕ ಶಾಸ್ತ್ರಗಳನ್ನು ಅಭ್ಯಸಿಸಿ, ಆಯುರ್ವೇದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅವರು ವೀರಭದ್ರೇಶ್ವರ ಪುರಾಣ, ಕಲಬುರ್ಗಿ ಶರಣ ಬಸವೇಶ್ವರ ಪುರಾಣಗಳನ್ನು ರಚಿಸಿದ್ದಾರೆ ಎಂದರು.

ಕಡೂರು ತಾಲ್ಲೂಕಿನ ಭಕ್ತಾದಿಗಳು ಮಾರ್ಚ್ 6 ರಿಂದ ಬಾಳೆಹೊನ್ನೂರಿನಲ್ಲಿ ನಡೆಯುವ ರೇಣುಕಾ ಜಯಂತಿಯ ಅನ್ನದಾಸೋಹಕ್ಕೆ ರೂ.1 ಲಕ್ಷ ನೀಡುವುದಾಗಿ ತಿಳಿಸಿದರು.

ಪೀಠದ ಭಕ್ತ ಕೆ.ಎಚ್.ಶಂಕರ್ ಮನೆಯಲ್ಲಿ ಏರ್ಪಡಿಸಿದ್ದ ಪಾದ ಪೂಜೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಸಮಾಜದ ಮುಖಂಡರಾದ ಪಿ.ಕೆ.ರೇವಣ್ಣಯ್ಯ, ಗಂಗಾಧರಯ್ಯ, ರೇಣುಕಾರಾಧ್ಯ ಮತ್ತಿತರರು ಇದ್ದರು.

ಯುಗಮಾನೋತ್ಸವ ಮಾ.4 ರಿಂದ
ಬಾಳೆಹೊನ್ನೂರು: ಇಲ್ಲಿನ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ ಮಾ. 4 ರಿಂದ 9 ರವರೆಗೆ ನಡೆಯಲಿದೆ.

ಯುಗಮಾನೋತ್ಸವ ಅಂಗವಾಗಿ ಧ್ವಜಾರೋಹಣ, ಹರಿದ್ರಾಲೇಪನ, ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ, ಶಯನೋತ್ಸ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.