ADVERTISEMENT

ರಾಷ್ಟ್ರೀಯ ಹೆದ್ದಾರಿ: ಸಮಸ್ಯೆ ನೂರಾರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 6:03 IST
Last Updated 30 ಅಕ್ಟೋಬರ್ 2017, 6:03 IST
ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿ ಗುಂಡಿ ಬಿದ್ದಿರುವುದು   

ತರೀಕೆರೆ: ಇಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206 ಅಭಿವೃದ್ಧಿಯಾಗದೇ ಇರುವುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು, ನಾಗರಿಕರಿಗೆ ತೊಂದರೆಯಾಗಿದೆ.
ಪಟ್ಟಣ ಬೆಳೆದಂತೆಲ್ಲ ಹೆದ್ದಾರಿಯೂ ಅಭಿವೃದ್ಧಿಯಾಗಬೇಕಿತ್ತು. ಆದರೆ ಆಡಳಿತದ ನಿರ್ಲಕ್ಷ್ಯದಿಂದಾಗಿ ‘ಅಘೋಷಿತ ಅಪಘಾತ’ ವಲಯವಾಗಿದೆ ಎಂದು ಪಟ್ಟಣದ ನಾಗರಿಕರು ಆರೋಪಿಸಿದ್ದಾರೆ.

ಪಟ್ಣಣಕ್ಕೆ ಬಂದೊಡನೆಯೇ ಸವಾರರು ಹಾಗೂ ಪಾದಚಾರಿಗಳು ಜೀವ ಭಯದಿಂದ ಹೋಗಬೇಕಾಗುತ್ತದೆ. ಅರೆ ಕ್ಷಣವು ಬಿಡುವಿಲ್ಲದಂತೆ ಭಾರಿ ಹಾಗೂ ಸಣ್ಣ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ‘ರಸ್ತೆಯು ಕಿರಿದಾಗಿರುವುದರಿಂದ ವರ್ಷಕ್ಕೆ ಸುಮಾರು 150 ಅಪಘಾತಗಳು ಸಂಭವಿಸುತ್ತಿದ್ದು, 30ರಿಂದ 40 ಮಂದಿ ಸಾವನ್ನಪ್ಪುತ್ತಿದ್ದಾರೆ’ ಎಂಬುದು ಪೋಲಿಸ್ ಇಲಾಖೆಯ ಮಾಹಿತಿ.

ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು 15 ದಿನಗದೊಳಗೆ ಸಂಚಾರಿ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೇ ಉಳಿದಿದೆ ಎಂಬುದು ಜನರ ಆರೋಪ.

ADVERTISEMENT

ಪಟ್ಟಣ ಪ್ರವೇಶಿಸುತ್ತಿದ್ದಂತೆ ರಸ್ತೆಯಲ್ಲಿ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಸುಗಮ ಸಂಚಾರಕ್ಕಾಗಿ ಬಳಸಿದ್ದ ರಿಫ್ಲೆಕ್ಟರ್‌ಗಳು ಹಾಳಾಗಿವೆ. ಆರ್.ಎಂ.ಸಿ. ಮುಂಭಾಗದಲ್ಲಿ ಸೇತುವೆ ಹಾಳಾಗಿ ಹತ್ತಾರು ವರ್ಷಗಳು ಕಳೆದರೂ ದುರಸ್ತಿಯಾಗಿಲ್ಲ. ಸಾರಿಗೆ ನಿಯಂತ್ರಣ ಅಧಿಕಾರಿಗಳಿಗಾಗಲಿ ಅಥವಾ ಹೆದ್ದಾರಿ ಪ್ರಾಧಿಕಾರದವರಿಗಾಗಲಿ ಇದರ ಗೊಡವೆ ಬೇಕಿಲ್ಲ ಎಂಬಂತೆ ಇದ್ದಾರೆ ಎಂಬುದು ನಾಗರಿಕರ ಆರೋಪ.

8 ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಪಟ್ಟಣದ ಅಭಿವೃದ್ಧಿಯ ಕನಸನ್ನು ಕಂಡಿದ್ದ ವರ್ತಕರು ಹಾಗೂ ಕಟ್ಟಡ ಮಾಲೀಕರು ಇದರ ವಸ್ತು ಸ್ಥಿತಿ ಅರಿತು ರಸ್ತೆ ವಿಸ್ತರಣೆಗೆ ಸ್ಪಂದಿಸಿದ್ದರು.

ಕೋಟಿ, ಕೋಟಿ ರೂಪಾಯಿ ನೀಡುತ್ತೇವೆ ಎಂದು ಜನಪ್ರತಿನಿಧಿಗಳು ನೀಡಿದ್ದ ಭರವಸೆ ಭರವಸೆಯಾಗಿದೆಯೇ ಹೊರತು ರಸ್ತೆ ಅಭಿವೃದ್ಧಿಯಾಗುತ್ತಿಲ್ಲ ಎನ್ನುತ್ತಾರೆ ಜನ ‘ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಈ ರಸ್ತೆಯಲ್ಲಿ ಕಾಲೇಜುಗಳು, ಎರಡು ಬದಿಗಳಲ್ಲಿ ಚಿತ್ರಮಂದಿರಗಳು, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ. ಮೆಡಿಕಲ್ ಸ್ಟೋರ್‌ಗಳು, ಗ್ಯಾರೇಜ್‌ಗಳು ಹಾಗೂ ಮಾರುಕಟ್ಟೆ ಇದ್ದು, ಜನ ಸಂದಣಿ ಇದ್ದೇ ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ’ ಎಂಬುದು ಜನರ ಆರೋಪ.

ರಾಜಧಾನಿ ಬೆಂಗಳೂರು ಹಾಗೂ ಹೊನ್ನಾವರ ನಡುವೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಮಾಜಿ ಮುಖ್ಯಮಂತ್ರಿ. ಸಭಾಧ್ಯಕರು, ವಿಪಕ್ಷ ನಾಯಕರು ಹಾಗೂ ಸಚಿವರು, ತಮ್ಮ ಕ್ಷೇತ್ರದಿಂದ ರಾಜಧಾನಿಗೆ ಇಲ್ಲಿಂದಲೇ ತೆರಳುತ್ತಾರೆ. ಆದರೆ ಯಾರೊಬ್ಬರಿಗೂ ರಸ್ತೆಯ ದುಃಸ್ಥಿತಿ ಅರಿವಾಗಿಲ್ಲ ಎನ್ನುತ್ತಾರೆ.

ಈ ನಡುವೆ ಆಡಳಿತವು ಚತುಷ್ಪಥ ಬೈಪಾಸ್ ರಸ್ತೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆ ವಿಭಜಕ ಅಳವಡಿಸಿ ಕೂಡಲೇ ಅಭಿವೃದ್ಧಿಪಡಿಸಿ ಎಂಬುದು ನಾಗರೀಕರ ಒತ್ತಾಯ.

ದಾದಾಪೀರ್, ತರೀಕೆರೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.