ADVERTISEMENT

ರೈತರಿಗೆ ಅನ್ಯಾಯವಾಗದಂತೆ ಕ್ರಮ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 10:00 IST
Last Updated 14 ಸೆಪ್ಟೆಂಬರ್ 2011, 10:00 IST
ರೈತರಿಗೆ ಅನ್ಯಾಯವಾಗದಂತೆ ಕ್ರಮ: ಸಿ.ಎಂ
ರೈತರಿಗೆ ಅನ್ಯಾಯವಾಗದಂತೆ ಕ್ರಮ: ಸಿ.ಎಂ   

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ತರೀಕೆರೆ ಭಾಗದ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಅನುಷ್ಠಾನ ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.

ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಮಂಗಳ ವಾರ ಬಾಗಿನ ಅರ್ಪಿಸಿದ ನಂತರ ತರೀಕೆರೆ ಪಟ್ಟಣದಲ್ಲಿ ಬಿಜೆಪಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತ ನಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ವಿಚಾರದಲ್ಲಿ ತರೀಕೆರೆ ಭಾಗದಲ್ಲಿ ಗೊಂದಲ ಇದೆ. ಈ ಭಾಗದ ರೈತರಿಗೆ ಅನ್ಯಾಯವಾಗದಂತೆ ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾ ರಿಯೂ ನನ್ನ ಮೇಲಿದೆ. ಈಗಾಗಲೇ ನಿರಾವರಿ ಸಚಿವರು, ನೀರಾವರಿ ತಜ್ಞರು ಮತ್ತು ರೈತ ಮುಖಂಡರೊಡನೆ ಎರಡು ಸುತ್ತಿನ ಚರ್ಚೆ ನಡೆಸಲಾಗಿದೆ.
 
ಕೊಪ್ಪಳ ವಿಧಾನಸಭೆ ಉಪ ಚುನಾವಣೆ ಮುಗಿದ ತಕ್ಷಣ ಮತ್ತೊಮ್ಮೆ  ನೀರಾವರಿ ಸಚಿವರು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ, ರೈತರಿಗೆ ಅನ್ಯಾಯವಾಗದಂತೆ ಯೋಜನೆಯನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಭದ್ರಾ ಜಲಾಶಯಕ್ಕೆ ಹೊಂದಿಕೊಂಡಂತೆ ಮೈಸೂರು ಮಾದರಿಯ ಬೃಂದಾವನ ನಿರ್ಮಿ ಸುವ ಬೇಡಿಕೆಯನ್ನು ಈ ಭಾಗದ ಶಾಸಕರು ಇಟ್ಟಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರವೂ ಉದ್ಯಾನದ ಭರವಸೆ ನೀಡಿದೆ. ಈ ಉದ್ದೇಶಕ್ಕೆ ತಮ್ಮ ಸಹಮತವಿದ್ದು, ಸುಂದರ ಮತ್ತು ಮಾದರಿ ಉದ್ಯಾನ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.

ರಾಜ್ಯದ ಈರುಳ್ಳಿ ಬೆಳೆಗಾರರ ಸಮಸ್ಯೆ ಗಮನದಲ್ಲಿಟ್ಟುಕೊಂಡು, ರಫ್ತು ನಿಷೇಧ ತೆರವುಗೊಳಿಸುವಂತೆ ಎರಡು ದಿನಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಲು ಹೋಗುವುದಿಲ್ಲ. ಅಭಿವೃದ್ಧಿಯ ಮೂಲಕವೇ ಎಲ್ಲ ಟೀಕೆಗಳಿಗೂ ಉತ್ತರ ನೀಡುತ್ತೇನೆ ಎಂದರು.

ಮಳೆಗಾಲ ಮುಗಿದ ತಕ್ಷಣ ಹೊಂಡಗಳಿಲ್ಲದಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾ ಗುವುದು. ಸಂಸದನಾಗಿದ್ದಾಗ ಕಾಫಿ ಬೆಳೆಗಾರರ ಸಮಸ್ಯಗೆ ಸ್ಪಂದಿಸಿ ಕೇಂದ್ರದಿಂದ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ತರಲು, ಬಹು ವರ್ಷಗಳ ಬೇಡಿಕೆಯಾಗಿದ್ದ ಕಡೂರು-ಚಿಕ್ಕಮಗಳೂರು ರೈಲು ಮಾರ್ಗ ಅತ್ಯಂತ ತ್ವರಿತಗತಿಯಲ್ಲಿ ನಿರ್ಮಾಣ ವಾಗುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನದಲ್ಲೂ ಯಶಸ್ಸು ಕಂಡಿದ್ದೇನೆ.

ಅತ್ಯಂತ ಹದಗೆಟ್ಟಿರುವ ಕಡೂರು- ಮಂಗಳೂರು ರಸ್ತೆ ಮೇಲ್ದರ್ಜೆಗೇರಿಸಲು ಆದ್ಯತೆ ನೀಡಲಾಗುವುದು. ಹಾಗೆಯೇ ಅಮೃತಮಹಲ್ ಕಾವಲು ಅಭಿವೃದ್ಧಿಗೂ ಒತ್ತುನೀಡಲಾಗುವುದು. ಹಳದಿ ಎಲೆರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

`ಇಡೀ ಜಿಲ್ಲೆಯ ಸಮಸ್ಯೆಯ ಅರಿವು ನನಗಿದೆ. ಚಿಕ್ಕಮಗಳೂರು ಜಿಲ್ಲೆಯೇ ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದೆ. ಜಿಲ್ಲೆಯ ಎಲ್ಲ ಶಾಸಕರ ಮನಸಿಗೆ ನೆಮ್ಮದಿ ಕೊಡುವ ಕೆಲಸ ಮಾಡಲಿದ್ದೇನೆ. ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕೊರಗು ಹಿಂದೆಯೂ ಇತ್ತು. ಈಗಲೂ ಇದೆ. ಅವಸರಕ್ಕೆ ಬೀಳದೆ ಇದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಿರುವುದರಿಂದ ವಿಳಂಬವಾಗಿದೆ. ಮುಂದಿನ ದಿನದಲ್ಲಿ ಜಿಲ್ಲೆಗೆ ಸಚಿವ ಸ್ಥಾನದ ಭರವಸೆಯನ್ನು ಖಂಡಿತ ಈಡೇರಿಸುತ್ತೇನೆ~ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಬದುಕಿನಲ್ಲಿ ಬೇರೆ ಬೇರೆ ರೀತಿಯ ಕನಸು ಕಂಡಿದ್ದೆ. ಆದರೆ ಮುಖ್ಯಮಂತ್ರಿಯಾಗುವ ಕನಸು ಕಂಡಿರಲಿಲ್ಲ. ಜಗತ್ತಿನಲ್ಲಿ ಯೋಗಾಯೋಗಳಿಗೆ ನಾನೇ ಜ್ವಲಂತ ಉದಾಹರಣೆ. ಲೋಕಸಭೆಗೆ ಕಳುಹಿಸಲು ಕೊಟ್ಟಿದ್ದ ನಿಮ್ಮ ಓಟಿಗೆ ಎಂತಹ ಶಕ್ತಿ ಇದೆ ಎಂದರೆ ಅದು ಇಂದು ನನ್ನನ್ನು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿದೆ. ನಿಮ್ಮ ಹುಡುಗ ನೀವು ಮೆಚ್ಚುವಂತೆ ನಾಡಿನ ಅಭಿವೃದ್ಧಿ ಮಾಡಲಿದ್ದಾನೆ. ನೀವು ಇಟ್ಟಿರುವ ನಂಬಿಕೆಗೆ ಎಂದಿಗೂ ಚ್ಯುತಿ ತಾರದೆ  ವಿಶ್ವಾಸ ಉಳಿಸಿಕೊಳ್ಳುವುದಾಗಿ ತರೀಕೆರೆಯ ಪುಣ್ಯ ಭೂಮಿಯಲ್ಲಿ ಪ್ರಮಾಣ ಮಾಡುತ್ತಿದ್ದೇನೆ~ ಎಂದು ಮುಖ್ಯಮಂತ್ರಿ ಭಾವುಕರಾಗಿ ನುಡಿದರು.

ಭಾಷಣದ ನಡುವೆ ಸಭಿಕರೊಬ್ಬರು ಶಿಕ್ಷಕರ ಸಮಸ್ಯೆ ಬಗ್ಗೆ ನೀಡಿದ ಚೀಟಿಯನ್ನು ಗಮನಿಸಿದ ಮುಖ್ಯಮಂತ್ರಿಗಳು, ಅನುದಾನ ರಹಿತ ಶಾಲೆಗಳ ಶಿಕ್ಷಕರ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸಿ, 1991ರಿಂದ ಅನುದಾನ ಸೌಲಭ್ಯ ನೀಡಲು ಈಗಾಗಲೇ 65 ಕೋಟಿ ಬಿಡುಗಡೆ ಮಾಡಿದೆ. ಉಳಿದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾನೂನು ಮತ್ತು ಸಂಸದೀಯ ವ್ಯವಾಹರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಎಸ್.ಸುರೇಶ್ ಕುಮಾರ್, ರಾಜಕಾರಣದ ಬಗ್ಗೆ ಜನರಲ್ಲಿ ಪ್ರೀತಿ ಗೌರವ ಬರುವ ರೀತಿ ಮುಖ್ಯಮಂತ್ರಿ ಜನರ ಸೇವೆ ಮಾಡಲಿದ್ದಾರೆ.

ಈಗಾಗಲೇ 40 ದಿನ ಪೂರೈಸಿರುವ ಮುಖ್ಯಮಂತ್ರಿಗಳು ಆಡಳಿತಕ್ಕೆ ಚುರುಕುಮುಟ್ಟಿಸಲು ಕೆಲಸ ಮಾಡಿದ್ದಾರೆ. ಇದು ಫಲ ನೀಡಲಿದೆ. ಹಿಂದಿನ ಮುಖ್ಯಮಂತ್ರಿ ರೂಪಿಸಿರುವ ಎಲ್ಲ ಒಳ್ಳೆಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಿದ್ದಾರೆ ಎಂದರು.

ತರೀಕೆರೆ ತಾಲ್ಲೂಕು ಬಿಜೆಪಿ ಘಟಕದಿಂದ ಮುಖ್ಯಮಂತ್ರಿಗಳಿಗೆ ಬೆಳ್ಳಿ ಕಿರೀಟ ಮತ್ತು ಬೆಳ್ಳಿ ಖಡ್ಗ ನೀಡಿ, ಅಭಿನಂದಿಸಲಾಯಿತು.

ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಡಾ.ವೈ.ಸಿ.ವಿಶ್ವಾನಾಥ್, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ  ಪ್ರಫುಲ್ಲಾ ಬಿ.ಮಂಜುನಾಥ್, ತೆಂಗುನಾರು ಮಂಡಳಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹಾಗೂ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.