ADVERTISEMENT

`ರೈತರ ಹೋರಾಟ ಹತ್ತಿಕ್ಕಬೇಡಿ'

ತರೀಕೆರೆ: ಪ್ರತಿಭಟನೆ 15ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:59 IST
Last Updated 15 ಡಿಸೆಂಬರ್ 2012, 8:59 IST
ತರೀಕೆರೆ ತಾಲ್ಲೂಕಿಗೆ ಸಮಗ್ರ ಮತ್ತು ಶಾಶ್ವತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ  ರೈತಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತರೀಕೆರೆ ತಾಲ್ಲೂಕಿಗೆ ಸಮಗ್ರ ಮತ್ತು ಶಾಶ್ವತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ ರೈತಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.   

ತರೀಕೆರೆ: ಭದ್ರಾನದಿಯಿಂದ ಮಳೆಗಾಲದಲ್ಲಿ ಎರಡು ಟಿಎಂಸಿ ನೀರನ್ನು ತರೀಕೆರೆ ತಾಲ್ಲೂಕಿಗೆ ಹರಿಸಿದಲ್ಲಿ ಇಡೀ ತಾಲ್ಲೂಕಿಗೆ ನೀರಾವರಿಯಾಗುತ್ತದೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರದ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ರೈತರು ಕಳೆದ 15 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ ಭಾಗ ವಹಿಸಿ ಮಾತನಾಡಿದ ಅವರು, ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿರುವುದಾಗಿ ರೈತರನ್ನು ಎಚ್ಚರಿಸಿದರು.

ಹದಿನೈದು ದಿನದಿಂದ ತಾಲ್ಲೂಕಿನ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಇತ್ತ ಸುಳಿಯದ ಜನಪ್ರತಿನಿಧಿಗಳ ಕ್ರಮ ನಾಚಿಗೇಡಿನ ಸಂಗತಿ. ರೈತರು ಸ್ವಚ್ಛೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಲು ತನ್ನ ನಿರ್ಧಾರವನ್ನು ಸರ್ಕಾರ ಸ್ವಷ್ಟವಾಗಿ ಘೋಷಣೆ ಮಾಡುವವರೆಗೂ ರೈತರ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಮುಖಂಡರು ಮಾತನಾಡಿ, ಸರ್ಕಾರ  ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ಇತ್ತ ಸುಳಿಯುತ್ತಿಲ್ಲ. ರೈತರು ಈ ಹಂತದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದ್ದು, ಚಳವಳಿ ಮಾದರಿಯಲ್ಲಿ ಮುಂದಿನ ಹೋರಾಟವನ್ನು ರೂಪಿಸಬೇಕಿದೆ ನಮ್ಮದು ರಾಜಕೀಯ ಉದ್ದೇಶದಿಂದ ಹೊರತಾದ ಪ್ರತಿಭಟನೆಯಾಗಿದೆ ಎಂದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಿಂದ ಹತ್ತಾರು ಟ್ರ್ಯಾಕ್ಟರ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಮಹಾತ್ಮ ಗಾಂಧಿ ವೃತ್ತದಲ್ಲಿ ರಸ್ತೆತಡೆ ಮತ್ತು ಧರಣಿ ನಡೆಸಿದರು.
ರೈತ ಮುಖಂಡರಾದ ಹಾಲೇಶಪ್ಪ, ಸುರೇಶ್, ಸೋಮಶೇಖರ್, ಮೋಹನ್, ಈಶ್ವರಪ್ಪ, ಸೋಮ್ಲೋನಾಯ್ಕ, ಪುಟ್ಟಮಲ್ಲಪ್ಪ, ರುದ್ರೇಗೌಡ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಕುಮಾರ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.