ADVERTISEMENT

ವಲಸೆ ಬಂದ ಕಾರ್ಮಿಕರಿಗೆ ಜ್ವರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 8:37 IST
Last Updated 18 ಜುಲೈ 2017, 8:37 IST
ನರಸಿಂಹರಾಜಪುರ ತಾಲ್ಲೂಕು ಕಮಲಾಪುರ ಗ್ರಾಮದಲ್ಲಿ ಬಯಲು ಸೀಮೆಯಿಂದ ಬಂದ ಕಾರ್ಮಿಕರಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಕಾರಣ ಸೋಮವಾರ ಆರೋಗ್ಯ ಇಲಾಖೆಯವರು ರಕ್ತದ ಮಾದರಿ ಸಂಗ್ರಹಿಸಿದರು.
ನರಸಿಂಹರಾಜಪುರ ತಾಲ್ಲೂಕು ಕಮಲಾಪುರ ಗ್ರಾಮದಲ್ಲಿ ಬಯಲು ಸೀಮೆಯಿಂದ ಬಂದ ಕಾರ್ಮಿಕರಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಕಾರಣ ಸೋಮವಾರ ಆರೋಗ್ಯ ಇಲಾಖೆಯವರು ರಕ್ತದ ಮಾದರಿ ಸಂಗ್ರಹಿಸಿದರು.   

ಸೀತೂರು (ಎನ್.ಆರ್.ಪುರ): ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮಲಾಪುರ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಕಾಮಗಾರಿ  ಕೈಗೊಳ್ಳಲು ಬಂದ ಬಯಲು ಸೀಮೆಯ ಕೆಲವು ಕಾರ್ಮಿಕರಿಗೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆಯವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ರಕ್ತಪರೀಕ್ಷೆ ಮಾಡಿದರು.

ಕಮಲಾಪುರ ಗ್ರಾಮದ ಶಾಲೆಯ ಸಮೀಪ ಟೆಂಟ್ ಹಾಕಿರುವ 24 ಜನರಲ್ಲಿ ಕೆಲವರಿಗೆ ಜ್ವರ ಕಾಣಿಸಿಕೊಂಡಿದೆ. ಚಿತ್ರದುರ್ಗ, ಆಂಧ್ರಪ್ರದೇಶ ಗಡಿಭಾಗವಾದ ರಾಯದುರ್ಗಾ ಮುಂತಾದ ಊರುಗಳಿಂದ ಕಾರ್ಮಿಕರು ಬಂದಿದ್ದು, ಇವರಲ್ಲಿ ಕೆಲವು ಮಕ್ಕಳಿಗೂ ಸಹ ಸಾಮಾನ್ಯ ಜ್ವರ ಕಾಣಿಸಿಕೊಂಡಿದೆ.

ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ  ಕೇಂದ್ರದ ಕಿರಿಯ ಆರೋಗ್ಯ ನಿರ್ದೇಶಕ ದರ್ಶನ್, ಆಶಾ ಕಾರ್ಯಕರ್ತೆ ಮಾಲಿನಿ, ಅಂಗನವಾಡಿ ಕಾರ್ಯಕರ್ತೆ ಅನುಪಮ ಮತ್ತು ತಂಡದವರು ಎಲ್ಲ ಕಾರ್ಮಿಕರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮುತ್ತಿನಕೊಪ್ಪ ಆರೋಗ್ಯ  ಕೇಂದ್ರಕ್ಕೆ ಕಳುಹಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ನಿರೀಕ್ಷಕ ದರ್ಶನ್, ‘ಬಯಲು ಸೀಮೆಯಿಂದ ಬಂದ ಕಾರ್ಮಿಕರಿಗೆ  ಸಾಮಾನ್ಯ ಜ್ವರ ಕಾಣಿಸಿಕೊಂಡಿದೆ. ಮಳೆಗಾಲವಾದ್ದರಿಂದ ಸಾಂಕ್ರಾಮಿಕ ರೋಗಗಳಾದ ಡೆಂಗಿ,ಚಿಗೂನ್‌ಗುನ್ಯ, ಮಲೇರಿಯಾ, ಎಚ್‌1ಎನ್‌1ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಕ್ತ ಪರೀಕ್ಷೆಗೆ ಕಳಿಸಿದ್ದೇವೆ. ಪರಿಸರದಲ್ಲಿ ಶುಚಿತ್ವ ಕಾಪಾಡುವಂತೆ ಸಲಹೆ ಮಾಡಲಾಗಿದೆ. ರಕ್ತಪರೀಕ್ಷೆಯ ಫಲಿತಾಂಶ ನೋಡಿ ಅಗತ್ಯ ಇದ್ದರೆ ಚಿಕಿತ್ಸೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.