ADVERTISEMENT

ವಾರದಲ್ಲಿ ಹಂದಿ ಹಿಡಿಯಲು ಪುರಸಭೆಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:20 IST
Last Updated 19 ಅಕ್ಟೋಬರ್ 2012, 7:20 IST

ತರೀಕೆರೆ: ಪಟ್ಟಣದ ನೈರ್ಮಲ್ಯವನ್ನು ಹಾಳು ಮಾಡುತ್ತಿರುವ ಹಂದಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಹಂದಿ ಸಾಕಣಿಕೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪುರಸಭಾಧ್ಯಕ್ಷ ಎಂ.ನರೇಂದ್ರ ಹೇಳಿದರು.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಉಮರ್ ಫಾರೂಕ್ ಪ್ರಸ್ತಾಪಿಸಿದ ನೈರ್ಮಲ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಂದಿ ಹಿಡಿಯುವವರಿಗೆ ಕೋರಿಕೆಯನ್ನು ಸಲ್ಲಿಸಲಾಗಿದ್ದು ಒಂದು ವಾರದಲ್ಲಿ ಪಟ್ಟಣದಲ್ಲಿ ಹಂದಿ ಮತ್ತು ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಚುಚ್ಚುಮದ್ದನ್ನು ನೀಡಲಾಗುವುದು ಎಂದು ತಿಳಿಸಿದರು.

ಪಟ್ಟಣದ ನೈರ್ಮಲ್ಯಕ್ಕೆ ಆದ್ಯತೆ ನೀಡಿದ್ದು, ಖಾಲಿ ನಿವೇಶನದಾರರಿಗೆ ನಿವೇಶನದಲ್ಲಿ ಸ್ವಚ್ಛತೆ ಕಾಯ್ದು ಕೊಳ್ಳುವಂತೆ ಮತ್ತು ಡೆಂಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆಯ ಜತೆ ಲಾರ್ವಾ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳ ಲಾಗಿದೆ ಎಂದು ತಿಳಿಸಿದ ಅವರು, ಒಂದು ವಾರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಜಿಲ್ಲಾ ಒಳಚರಂಡಿ ಯೋಜನೆಯ ಎಇಇ ವೈದೇಹಿ ಪುರಸಭೆ ಕೋರಿಕೆಯ ಮೇರೆಗೆ ಒಳಚರಂಡಿ ಯೋಜನೆಯ ಅಂದಾಜು ನಕ್ಷೆ ತಯಾರಿಸಿದ್ದು, ಪಟ್ಟಣದ ಹೊಸ ಬಡಾವಣೆಗಳು ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಎಲ್ಲಿವೆ ಎಂಬುದನ್ನು ಗುರುತಿಸಬೇಕಿದೆ ಎಂದು ತಿಳಿಸಿದ ಅವರು ಎಸ್.ಬಿ.ಆರ್. ಎಂಬ ನೂತನ ತಂತ್ರಜ್ಞಾನವನ್ನು ಅಳವಡಿಸಿ ದಲ್ಲಿ ಪ್ರಸ್ತುತ ಯೋಜನೆಗೆ ರೂ.10 ಕೋಟಿ ವ್ಯಯವಾಗುತ್ತದೆ ಎಂದರು.

ನಾಲ್ಕುವರ್ಷದ ಹಿಂದೆ ರೂ 4ಲಕ್ಷ ಹಣವನ್ನು ಪುರಸಭೆ ಭರಿಸಿ ಅಂದಾಜು ನಕ್ಷೆ ತಯಾರಿಸಲು ಸೂಚಿಸಿದ್ದು, ಇನ್ನು ಯೋಜನೆಯ ಅಂದಾಜುಪಟ್ಟಿ ಸಿದ್ದವಾಗಿಲ್ಲವೆಂದರೆ ಈ ಯೋಜನೆ ನೆನೆಗುದಿಗೆ ಬಿದ್ದಹಾಗೆ ಎಂದು ಸದಸ್ಯ ಧರ್ಮರಾಜ್ ಆಕ್ಷೇಪಿಸಿದರು.

ಪಟ್ಟಣದ ಪ್ರಮುಖ ಬೀದಿಗಳು ಸಂಪೂರ್ಣ ಹಾಳಾಗಿದ್ದು, ಅವುಗಳಿಗೆ ಡಾಂಬರೀಕರಣಗೊಳಿಸುವಂತೆ ಸದಸ್ಯ ಬಸವರಾಜ್ ಒತ್ತಾಯಿಸಿದರು. ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಕಾಯ್ದು ಕೊಳ್ಳಬೇಕು ಎಂದು ಸದಸ್ಯ ಉಮರ್ ಫಾರೂಕ್ ಒತ್ತಾಯಿಸಿದರು.

ಸಮಾಜ ಕಲ್ಯಾಣ, ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳು, ಉಪಾಧ್ಯಕ್ಷೆ ಚಂದ್ರಮ್ಮ ಪುರು ಷೋತ್ತಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಿಲ್ಟ್ರಿಶ್ರೀನಿವಾಸ್, ಮುಖ್ಯಾ ಧಿಕಾರಿ ಕೆ.ಎಂ. ಸತ್ಯನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.