ADVERTISEMENT

ವಿಜೃಂಭಣೆಯ ಗಣೇಶೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 7:55 IST
Last Updated 3 ಅಕ್ಟೋಬರ್ 2012, 7:55 IST
ವಿಜೃಂಭಣೆಯ ಗಣೇಶೋತ್ಸವಕ್ಕೆ ತೆರೆ
ವಿಜೃಂಭಣೆಯ ಗಣೇಶೋತ್ಸವಕ್ಕೆ ತೆರೆ   

ಬಾಳೆಹೊನ್ನೂರು: ಜಿಲ್ಲೆಯಲ್ಲೇ ಅತೀ ದೊಡ್ಡ ಗಣೇಶೋತ್ಸವದಲ್ಲೊಂದಾದ ಇಲ್ಲಿನ ವಿದ್ಯಾಗಣಪತಿ ಸೇವಾ ಸಮಿತಿಯ 54ನೇ ವರ್ಷದ ಗಣೇಶೋತ್ಸವಕ್ಕೆ ಸೋಮವಾರ ವಿಜೃಂಭಣೆಯ ತೆರೆ ಬಿದ್ದಿತು.

 ಚೌತಿಯಿಂದ ಹದಿಮೂರು ದಿನಗಳ ಕಾಲ ಪ್ರತಿದಿನ ವಿಶೇಷ ಧಾರ್ಮಿಕ ಕಾರ್ಯ, ಗಣಹೋಮ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿತ್ತು. 

 ಕಡೇ ದಿನವಾದ ಸೋಮವಾರ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದಿದ್ದು, ಮಧ್ಯಾಹ್ನ ಹನ್ನೆರಡು ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ನಡೆದ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

 ಬಂಟ್ವಾಳದ ಚಿಲಿಪಿಲಿ ಗೊಂಬೆಗಳ ನೃತ್ಯ, ತಟ್ಟಿರಾಯ ಪ್ರದರ್ಶನ, ಕೇರಳದ ಚಂಡೆ, ನರಸಿಂಹರಾಜಪುರದ ವಿಶೇಷ ಬ್ಯಾಂಡ್‌ಸೆಟ್ ಮೇಳ, ನಾಸಿಕ್ ಡೋಲ್, ಚಲಿಸುವ ಆರ್ಕೆಸ್ಟ್ರಾ ಹಾಗೂ ಮಲೆನಾಡಿನ ಹಲಗೆ ಓಲಗ ಮೆರವಣಿಗೆಗೆ ಇನ್ನಷ್ಟು ಕಳೆ ಕಟ್ಟಿತ್ತು. ಇದರೊಂದಿಗೆ ಆಕರ್ಷಕ ಸಿಡಿಮದ್ದು ಪ್ರದರ್ಶನವೂ ಮೆರವಣಿಗೆಗೆ ರಂಗುತಂದಿತ್ತು

 ಪಟ್ಟಣದ ತುಂಬೆಲ್ಲಾ ತಳಿರು ತೋರಣಗಳಿಂದ ಸಿಂಗರಿಸಿದ್ದು, ಸಾವಿರಾರು ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯ ಸವಿ ಸವಿದರು. ಸಮಿತಿಯ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಟಿ.ಎಂ.ಉಮೇಶ್‌ಕಲ್ಮಕ್ಕಿ, ಕೆ.ಕೆ.ವೆಂಕಟೇಶ್, ಮಧುಸೂಧನ್, ವಿ.ಜಿ.ನಾರಾಯಣ್, ಮೋಹನ್‌ಕುಮಾರ್, ಹಿರಿಯಣ್ಣ ಸೇರಿದಂತೆ ಸಮಿತಿ ಸದಸ್ಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

 ಮುಂಜಾಗರೂಕತಾ ಕ್ರಮವಾಗಿ ಬಿಗಿಪೊಲೀಸ್ ಬಂದೋಬಸ್ತ್ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಎರಡು ದಿನಗಳಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

 ಇಲ್ಲಿನ ಭದ್ರಾನದಿಯಲ್ಲಿ ಗಣೇಶನನ್ನು ವಿಸರ್ಜಿಸುವ ಮೂಲಕ 54ನೇ ಗಣೇಶೋತ್ಸವಕ್ಕೆ ವೈಭವದ ತೆರೆಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.