ADVERTISEMENT

ವಿರೋಧದ ನಡುವೆ ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 6:04 IST
Last Updated 25 ಅಕ್ಟೋಬರ್ 2017, 6:04 IST

ತರೀಕೆರೆ: ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ನಾಡಹಬ್ಬಗಳ ಪೂರ್ವಭಾವಿ ಸಭೆಯು ಗದ್ದಲದ ಗೂಡಾಗಿ ಪರಿಣಮಿಸಿ, ಸಭೆ ಗುರುವಾರಕ್ಕೆ ಮುಂದೂಡಲಾಯಿತು. ಕನ್ನಡ ರಾಜ್ಯೋತ್ಸವ ಆಚರಣೆ, ಟಿಪ್ಪು ಸುಲ್ತಾನ್ ಜಯಂತಿ ಹಾಗೂ ಕನಕದಾಸರ ಜಯಂತಿಯನ್ನು ಆಚರಿಸುವ ಉದ್ದೇಶದಿಂದ ಶಾಸಕ ಜಿ.ಎಚ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಾಡಹಬ್ಬಗಳ ಸಮಿತಿಯ ವತಿಯಿಂದ ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖಂಡರನ್ನು, ಗಣ್ಯರು ಹಾಗೂ ವಿವಿಧ ಸಮಾಜಗಳ ಮುಖಂಡರನ್ನು ಕರೆಯಲಾಗಿತ್ತು.

ಶಾಸಕರು ಕಾರ್ಯನಿಮಿತ್ತ ಕ್ಷೇತ್ರದಿಂದ ಹೊರ ಹೋಗಿರುವ ಕಾರಣ ಸಭೆಯನ್ನು 26ರಂದು ಮುಂದೂಡಲಾಗಿದೆ ಎಂದು ನಾಡಹಬ್ಬಗಳ ಸಮಿತಿಯ ಅಧ್ಯಕ್ಷರಾಗಿರುವ ನೂತನ ತಹಶೀಲ್ದಾರ್ ಧರ್ಮೋಜಿರಾವ್ ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಪರ ಸಂಘಟನೆ ಮುಖಂಡ ಬಿ.ಪಿ.ವಿಕಾಸ್, ‘ಸಭೆಗೆ ಎಲ್ಲರನ್ನು ಆಹ್ವಾನಿಸಿ ಶಾಸಕರ ಗೈರಿನ ಕಾರಣದಿಂದ ಸಭೆ ಮುಂದೂಡುವುದು ಸರಿಯಲ್ಲ, ಎಲ್ಲರ ಸಲಹೆ ಪಡೆದು ಸಭೆ ಮುಂದುವರೆಸಿ’ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್, ‘ಕನ್ನಡ ರಾಜ್ಯೋತ್ಸವದ ವಿಚಾರವಾಗಿ ಮಾತ್ರ ಚರ್ಚೆ ನಡೆಸೋಣ. ಶಾಸಕರ ಹಾಜರಿಯಲ್ಲಿ ಉಳಿದ ಜಯಂತಿಗಳ ಸಭೆ ನಡೆಸಲಾಗುವುದು’ ಎಂದು ಸಭೆ ಮುಂದುವರೆಸಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ ಕೆಲ ಮುಖಂಡರು, ಎಲ್ಲ ವಿಷಯಗಳನ್ನು ಈ ಸಭೆಯಲ್ಲಿಯೇ ಚರ್ಚಿಸಬೇಕು ಎಂದು ಪಟ್ಟು ಹಿಡಿದಾಗ ಗದ್ದಲ ಉಂಟಾಯಿತು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ನರೇಂದ್ರ ಮಾತನಾಡಿ, ‘ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಕಾರ್ಯಕ್ರಮದ ಜವಾಬ್ದಾರಿ ಹೋರಲು ಅಧಿಕಾರಿಗಳು ಬೇಡವೇ? ಆದ್ದರಿಂದ ಸಭೆಗೆ ಅಧಿಕಾರಿಗಳು ಬರಲಿ, ಇಲ್ಲದಿದ್ದರೆ ಸಭೆ ಮುಂದೂಡಿ’ ಎಂದು ಸಲಹೆ ನೀಡಿದರು.

ಸಭೆಯನ್ನು ತಹಶೀಲ್ದಾರ್ ಮುಂದೂಡುತ್ತಿದ್ದಂತೆಯೇ ಕುರುಬ ಸಮಾಜದ ಅಧ್ಯಕ್ಷ ಡಿ.ವಿ.ಪದ್ಮರಾಜು ತಹಶೀಲ್ದಾರ್‌ರಿಗೆ ಧಿಕ್ಕಾರ ಕೂಗಿದರಲ್ಲದೇ, ತಹಶೀಲ್ದಾರ್ ನಡೆಯನ್ನು ಖಂಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ‘ತಾಲ್ಲೂಕು ಆಡಳಿತ ನಾಲ್ಕು ವರ್ಷಗಳಿಂದಲೂ ಬೇಕಾ ಬಿಟ್ಟಿ ಆಡಳಿತ ನಿರ್ವಹಿಸುತ್ತಿದೆ. ಮುಖಂಡರನ್ನು, ಸಮಾಜದ ಗಣ್ಯರನ್ನು ಕರೆದು ಅವಮಾನ ಮಾಡಲಾಗಿದೆ. ಆಡಳಿತ ಏಕ ವ್ಯಕ್ತಿ ಕೇಂದ್ರಿತವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ರೈತ ಕೃಷ್ಣಪ್ಪ, ಮೋಹ್ಸೀನ್ ಪಾಷ ಸಭೆ ಮುಂದೂಡಿದನ್ನು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.