ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಹಲಸೂರು ಗ್ರಾಮದ ರೆಹಮಾನ್ (28) ಡೆಂಗೆ ಜ್ವರಕ್ಕೆ ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಕಳೆದ ಶುಕ್ರವಾರ ಜ್ವರದಿಂದ ನರಳುತ್ತಿದ್ದ ರೆಹಮಾನ್ ಅವರನ್ನು ಲಕ್ಕವಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.
ನಂಜಪ್ಪ ಆಸ್ಪತ್ರೆಯಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ರೆಹಮಾನ್‌ಗೆ ಡೆಂಗೆ ಜ್ವರ ಇತ್ತು ಎಂದು ಆಸ್ಪತ್ರೆ ವೈದ್ಯರು ಆತನ ಕುಟುಂಬಕ್ಕೆ ತಿಳಿಸಿದ್ದರು. ಹಲಸೂರು ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ಎಲ್ಲೆಂದರಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆ ಕಾಟ ವಿಪರೀತವಾಗಿದ್ದು,ಒಬ್ಬರನ್ನು ಬಲಿ ತೆಗೆದುಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್ ದೂರಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್ ಅವರನ್ನು ಭಾನುವಾರ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿ ಗ್ರಾಮ ಪಂಚಾಯಿತಿಯು ಗ್ರಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡದೆ ಉದಾಸೀನತೆ ತೋರುತ್ತಿದೆ ಎಂದು ಆಪಾದಿಸಿದ ಅವರು, ತಾಲ್ಲೂಕು ಮತ್ತು ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಗಣೇಶ್, ತಾಲ್ಲೂಕಿನಲ್ಲಿ ಡೆಂಗೆ ಸೋಂಕು ಪೀಡಿತ ಯಾವುದೆ ಪ್ರಕರಣಗಳು ಪತ್ತೆಯಾಗಿಲ್ಲ. ಹಲಸೂರು ಗ್ರಾಮದ ರೆಹಮಾನ್ ಅವರಿಗೆ ಲಕ್ಕವಳ್ಳಿಯ ವೈದ್ಯ ಡಾ.ಸುರೇಶ್ ಪ್ರಥಮ ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ಅವರಿಗೆ ಮೂತ್ರಕೋಶದ ತೊಂದರೆಯಿತ್ತು. ಆದರೆ ಜ್ವರದ ಬಾಧೆಯಿರಲಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.