ADVERTISEMENT

ಶತಮಾನೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 6:25 IST
Last Updated 1 ಅಕ್ಟೋಬರ್ 2017, 6:25 IST
ತರೀಕೆರೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಹಿಂದೆ ನಡೆದ ಕುಸ್ತಿ ಪಂದ್ಯ.
ತರೀಕೆರೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಹಿಂದೆ ನಡೆದ ಕುಸ್ತಿ ಪಂದ್ಯ.   

ಮಲೆನಾಡ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ‘ಬಯಲು ಜಂಗಿ ಕುಸ್ತಿ’ ಸ್ಪರ್ಧೆಯು ಈ ಸಾರಿ ಶತಮಾನೋತ್ಸವ ಆಚರಿಸಿಕೊಳ್ಳಲು ಸಜ್ಜಾಗುತ್ತಿದೆ. ಈ ಮೂಲಕ ಆಧುನಿಕತೆಯ ಪ್ರಹಾರಕ್ಕೆ ತತ್ತರಿಸುತ್ತಿರುವ ನೆಲದ ಹಲವು ಕ್ರೀಡೆಗಳಲ್ಲಿ ಕುಸ್ತಿ ಮಾತ್ರ ಇಲ್ಲಿನ ಜನರ ಕ್ರೀಡಾ ಪ್ರೇಮದಿಂದಾಗಿ ಮತ್ತೊಮ್ಮೆ ಪುನರುಜ್ಜೀವನಗೊಳ್ಳುತ್ತಿದೆ.

ಗೌರವ ಮತ್ತು ಪ್ರತಿಷ್ಠೆಯ ಸಂಕೇತ ಎನಿಸಿರುವ ಈ ಕುಸ್ತಿ ಸ್ಪರ್ಧೆಯನ್ನು ಮೈಸೂರು ದಸರಾ ಮುಗಿದ ನಂತರ ತರೀಕೆರೆ ಪಟ್ಟಣದಲ್ಲಿ ಶ್ರೀ ಗುರು ರೇವಣಿಸಿದ್ದೇಶ್ವರ ಗರಡಿ ಕುಸ್ತಿ ಸಂಘವು ಏರ್ಪಡಿಸುತ್ತದೆ. ಅಕ್ಟೋಬರ್ 1,2 ಮತ್ತು 3ರಂದು ಮೂರು ದಿನಗಳ ಕಾಲ ಬಯಲು ರಂಗಮಂದಿರದಲ್ಲಿ ಸ್ಪರ್ಧೆ ನಡೆಯಲಿದ್ದು, ಹಲವು ವಿಶೇಷತೆಗಳಿಂದಾಗಿ ಕುಸ್ತಿ ಪ್ರೇಮಿಗಳ ಕುತೂಹಲ ಹೆಚ್ಚಿಸಿದ್ದು ಕ್ಷಣಗಣನೆ ಆರಂಭವಾಗಿದೆ.

ಸ್ವಭಾವತಃ ಕುಸ್ತಿ ಪಟುಗಳಾಗಿದ್ದ ತರೀಕೆರೆಯನ್ನು ಆಳಿದ ಪಾಳೇಗಾರರು ಈ ಭಾಗದಲ್ಲಿ ಕುಸ್ತಿಯನ್ನು ಏರ್ಪಡಿಸಿ, ಪ್ರೋತ್ಸಾಹಿಸಿ ಬೆಳೆಸಿದರು. ಇಂದಿಗೂ ಸಹ ಇಲ್ಲಿನ ಸ್ಪರ್ಧಾ ವಿಜೇತರಿಗೆ ಕೊಡ ಮಾಡುವ ಅಖಾಡದ ಬಂಗಾರದ ಬಳೆಯನ್ನು ಪಾಳೆಗಾರ ಸರ್ಜಾ ಹನುಮಪ್ಪ ನಾಯಕರ ಹೆಸರಿನಲ್ಲಿ ನೀಡಿ ಕುಸ್ತಿ ಪಟುವನ್ನು ಪುರಸ್ಕರಿಸಲಾಗುತ್ತದೆ.

ADVERTISEMENT

ಕುಸ್ತಿಯ ಪ್ರಮುಖ ಆಕರ್ಷಣೆಯಾಗಿರುವ ಬೆಳ್ಳಿ ಗದೆಯನ್ನು ಪಟ್ಟಣದ ಪುರಸಭೆಯ ವತಿಯಿಂದ ನೀಡಲಾಗುತ್ತದೆ. ಇಲ್ಲಿನ ಬೆಳ್ಳಿ ಗದೆ ವಿಜೇತ ಕುಸ್ತಿಪಟುವಿಗೆ ರಾಜ್ಯ ಕುಸ್ತಿ ವಲಯದಲ್ಲಿ ವಿಶೇಷ ಮನ್ನಣೆ ಲಭ್ಯವಾಗುತ್ತದೆ. ಉಳಿದಂತೆ ನೀಡಲಾಗುವ ಬೆಳ್ಳಿ ಕಿರೀಟ, ಚಿನ್ನದ ಪದಕಗಳು, ನಗದು ಬಹುಮಾನಗಳನ್ನು ದಾನಿಗಳಿಂದ ಸ್ವೀಕರಿಸಿ ಸ್ಪರ್ಧೆ ಆಯೋಜಿಸಲಾಗುತ್ತದೆ.

ಕುಸ್ತಿಯ ರಹಸ್ಯ ಪಟ್ಟುಗಳನ್ನು ಕಲಿಸುತ್ತಿದ್ದ ಪಟ್ಟಣದ ಗರಡಿ ಮನೆಗಳಾದ ರೇವಣ ಸಿದ್ದೇಶ್ವರ, ಭಗೀರಥ, ಮುರುಘ ರಾಜೇಂದ್ರ, ಮುರುಫ್, ಚನ್ನಕೇಶವ ಹಾಗು ಇನ್ನಿತರೇ ಗರಡಿ ಮನೆಗಳು ನಿರ್ವಹಣೆ ಇಲ್ಲದೆ ಸೊರಗಿದ್ದು, ಕೆಲವೊಂದು ಮಾತ್ರ ಉಳಿದು ಕುಸ್ತಿ ಪಟುಗಳನ್ನು ಈಗಲೂ ತಯಾರಿಸುತ್ತಿವೆ.

ಶತಮಾನೋತ್ಸವದ ಆಚರಣೆಗಾಗಿ ಬಯಲು ರಂಗಮಂದಿರದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರೇಕ್ಷಕರ ಸುಖಾಸೀನ ಗ್ಯಾಲರಿ ನಿರ್ಮಿಸಲಾಗಿದ್ದು, ಕೃತಕ ಕ್ರೀಡಾಂಗಣವನ್ನೇ ಸೃಷ್ಟಿಸಲಾಗಿದೆ. ಸಂಜೆಗಾಗಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಕುಸ್ತಿ ಪಟುಗಳನ್ನು ಸನ್ಮಾನಿಸಲಾಗುತ್ತದೆ. ಬಂದಂತಹ ಕುಸ್ತಿ ಪಟುಗಳಿಗೆ ಉಚಿತ ಊಟ ಹಾಗೂ ವಸತಿಗಾಗಿ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವೆನಿಸಿದೆ.

ನೂರರ ಸಂಭ್ರಮದಲ್ಲಿರುವ ಕುಸ್ತಿ ಸ್ಪರ್ಧೆಯಲ್ಲಿ ಹಿಂದೆ ಮಹಾರಾಷ್ಟ್ರದ ಸಾಂಗ್ಲಿ, ಖಾನಾಪುರ, ಸೇರಿದಂತೆ ರಾಜ್ಯದ ಹೈದರಾಬಾದ್-ಕರ್ನಾಟಕ ಭಾಗದಿಂದ ಹೆಸರಾಂತ ಕುಸ್ತಿಪಟುಗಳು ಭಾಗವಹಿಸಿ ತಮ್ಮ ಕಲೆಯನ್ನು ಇಲ್ಲಿನ ರಸಿಕರಿಗೆ ಉಣ ಬಡಿಸಿದ್ದು ಈಗ ಇತಿಹಾಸ. ಬೆಳಗಾಂ ನಾಗಪ್ಪ, ಅರ್ಜುನ ಖಾನಾಪುರಿ, ಸ್ಟಾರ್ ನಾಗಪ್ಪ, ಚೋಟಾ ಚಾರ್ಲಿ, ಕೊಕ್ರೆ ಪೈಲ್ವಾನ್ ಅಂತಹವರು ಇಲ್ಲಿ ಕುಸ್ತಿ ಆಡಿದ್ದನ್ನು ಜನ ಸ್ಮರಿಸುತ್ತಾರೆ.

ಮೈಸೂರು ದರ್ಬಾರಿನಲ್ಲಿ ಕುಸ್ತಿ ಪ್ರದರ್ಶಿಸಿದ್ದ ಪಟ್ಟಣದ ಕುಸ್ತಿ ಬಸಣ್ಣ ಸೇರಿದಂತೆ ಕುಸ್ತಿ ಸಿದ್ದಣ್ಣ, ಕಿಟ್ಟಿ ಕರಿಯಣ್ಣ, ಅಣಬೆ ನಂಜುಂಡಪ್ಪ, ವಗ್ಗಯ್ಯ, ಕುರಿಯರ ತಿಮ್ಮಣ್ಣ, ಚೆನ್ನಣ್ಣರ ಶಿವಣ್ಣ, ಬೆಲ್ಲದ ಪುಟ್ಟಣ್ಣ, ಕಾಟೀ ಬೈರಪ್ಪ, ಬಂಡಿ ಕರಿಯಣ್ಣ, ಕರಡಿಗೆ ಮಲ್ಲಣ್ಣ, ಅಣ್ಣಪ್ಪ, ಗುಲಾಂ ಸಾಬ್, ಪ್ಯಾರು ಸಾಬ್, ಬಕ್ಷಿ ಸಾಬ್ ರಂತಹ ಪೈಲ್ವಾನರುಗಳು ಇಲ್ಲಿನ ಕುಸ್ತಿ ಕಲೆಯನ್ನು ಪ್ರಚುರ ಪಡಿಸಿದ್ದಾರೆ.

ಅವಿಸ್ಮರಣೀಯವಾಗಲಿರುವ ಸ್ಪರ್ಧೆಗೆ ತಾಲ್ಲೂಕಿನ ಜನ ಸಹಕರಿಸಿ ಸಾಕ್ಷಿಯಾಗಿದ್ದಾರೆ. ಯಾವುದೇ ಕೊರತೆಯಾಗದಂತೆ ಸ್ಪರ್ಧೆಯನ್ನು ಸಂಘ ನಿಭಾಯಿಸಲಿದೆ. ಈ ಸಾರಿ ವಿಶಿಷ್ಟ ಕುಸ್ತಿ ಸ್ಪರ್ಧೆ ನಡೆಯುವ ವಿಶ್ವಾಸವಿದೆ ಎನ್ನುತ್ತಾರೆ ಕುಸ್ತಿ ಸಂಘದ ಅಧ್ಯಕ್ಷ ಟಿ.ಎಂ.ರಘು.

ರಾಜಾಶ್ರಯದ ಕುಸ್ತಿ ಕಲೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಕುಸ್ತಿ ಪಟುಗಳ ಬದುಕಿಗೆ ನೌಕರಿಯ ಭದ್ರತೆ ಒದಗಿಸಲಿ. ಅಳಿವಿನಂಚಿನಲ್ಲಿರುವ ಗರಡಿ ಮನೆಗಳಿಗೆ ಆಧುನಿಕ ಸ್ಪರ್ಶ ನೀಡಿ ಪ್ರಾಚೀನ ಕಲೆಯನ್ನು ಉಳಿಸಲಿ ಎಂದು ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.