ADVERTISEMENT

ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಹೋರಾಟ ಸಮಿತಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 10:04 IST
Last Updated 1 ಮಾರ್ಚ್ 2018, 10:04 IST
ಬಯಲು ಸೀಮೆ ಸಮಗ್ರ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ಸದಸ್ಯರು  ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ, ಮುಖಂಡರಾದ ಬಿ.ಅಮ್ಜದ್, ರವೀಶ್ ಕ್ಯಾತನಬೀಡು, ಎಚ್.ಎಂ.ರೇಣುಕಾರಾಧ್ಯ ಇದ್ದಾರೆ.
ಬಯಲು ಸೀಮೆ ಸಮಗ್ರ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ, ಮುಖಂಡರಾದ ಬಿ.ಅಮ್ಜದ್, ರವೀಶ್ ಕ್ಯಾತನಬೀಡು, ಎಚ್.ಎಂ.ರೇಣುಕಾರಾಧ್ಯ ಇದ್ದಾರೆ.   

ಚಿಕ್ಕಮಗಳೂರು: ಅಯ್ಯನಕೆರೆ, ದಾಸರಹಳ್ಳಿ ಕೆರೆ, ಮದಗದ ಕೆರೆ, ಮಾದರಸನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ಗೊಳಿಸಬೇಕು ಎಂದು ಬಯಲು ಸೀಮೆ ಸಮಗ್ರ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಜಮಾಯಿಸಿದ ಕಾರ್ಯ ಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು.

ರೈತ ಮುಖಂಡ ಗುರುಶಾಂತಪ್ಪ ಮಾತನಾಡಿ, ‘ಕಡೂರು ತಾಲ್ಲೂಕಿನ ಸಖರಾಯಪಟ್ಟಣ, ಲಕ್ಯಾ ಹೋಬಳಿಗಳಲ್ಲಿ ಬರದ ಛಾಯೆ ಇದ್ದು, ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಕರಗಡ ಏತ ನೀರಾವರಿ ಯೋಜನೆ ಎರಡನೇ ಹಂತದ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಸವನಹಳ್ಳಿ ಕೆರೆಯಿಂದ ಲಕ್ಯಾ ಹೋಬಳಿಯ ದಾಸರಹಳ್ಳಿ ಕೆರೆಗೆ ಮಳೆಗಾಲದಲ್ಲಿ ಏತ ನೀರಾವರಿ ಮೂಲಕ ನೀರು ಹರಿಸಬೇಕು. ಬೈರಾಪುರ ಪಿಕಪ್‌ನಿಂದ ಏತ
ನೀರಾವರಿ ಮೂಲಕ ಮಾದರಸನ ಕೆರೆಗೆ ನೀರು ಹರಿಸಲು ಸರ್ಕಾರ ಕ್ರಮಕೈಗೊಳ್ಳ ಬೇಕು’ ಎಂದರು.

ಸಮಿತಿ ಸದಸ್ಯರಾದ ನಟರಾಜ್ ಎಸ್.ಕೊಪ್ಪಲು, ಆರ್.ಆರ್. ಮಹೇಶ್, ಲೋಕೇಶ್‌ಮೂರ್ತಿ, ನಾಗರಾಜ್, ಕೆಂಗೇಗೌಡ, ಬಿ.ಎನ್. ವೀರಭದ್ರಪ್ಪ, ನಿಡಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಇದ್ದರು.

ದಸಂಸ ಪ್ರತಿಭಟನೆ

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ತಾಲ್ಲೂಕಿನ ವಸ್ತಾರೆ ಹೋಬಳಿ ಚಿತ್ತುವಳ್ಳಿಯ ಸರ್ವೆ ನಂ 49, 50, 51ರಲ್ಲಿ 26 ಎಕರೆ ಸರ್ಕಾರಿ ಜಮೀನು ಇದೆ. ಈ ಜಮೀನಿನಲ್ಲಿ ಯಾರು ಸಾಗುವಳಿ ಮಾಡುತ್ತಿಲ್ಲ. ಅಧಿಕಾರಿಗಳು ಗ್ರಾಮದ ಐದು ಜನರಿಂದ ಹಣ ಪಡೆದು ನಮೂನೆ 53ರಲ್ಲಿ 14.5 ಎಕರೆ ಜಮೀನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಗ್ರಾಮದಲ್ಲಿ 100ಕ್ಕೂ ಹೆಚ್ಚು ದಲಿತ ಕುಟುಂಬಗಳು ಇದ್ದು, ಅವರಿಗೆ ನಿವೇಶನ ಇಲ್ಲ. ಅಕ್ರಮವಾಗಿ ಮಂಜೂರು ಮಾಡಿರುವ ಗ್ರಾಮದ ಸರ್ಕಾರಿ ಜಮೀನನ್ನು ಹಿಂಪಡೆಯಬೇಕು. ನಿವೇಶನರಹಿತ ದಲಿತರಿಗೆ ನಿವೇಶನ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಅಂಬಳೆ ಹೋಬಳಿ ಹಾದಿಹಳ್ಳಿಯಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಜಿಲ್ಲಾಧಿಕಾರಿ ಸ್ಥಳ ಸೂಚಿಸಿದ್ದರು. ಆ ಜಾಗದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅನುಮತಿ ನೀಡುತ್ತಿಲ್ಲ’ ಎಂದು ದೂಷಿಸಿದರು.

‘ಹಾದಿಹಳ್ಳಿ ಹರಿಜನ ಕಾಲೋನಿಯಲ್ಲಿ 30 ಮನೆಗಳಿವೆ. ಒಂದೇ ಮನೆಯಲ್ಲಿ ಎರಡ್ಮೂರು ಕುಟುಂಬ ವಾಸಿಸುತ್ತಿವೆ. ಗ್ರಾಮಠಾಣಾ ವ್ಯಾಪ್ತಿಯ ಹರಿಜನ ಕಾಲೋನಿಯಲ್ಲಿ ಹತ್ತು ಎಕರೆ ಜಮೀನು ಇದೆ. ಅದರಲ್ಲಿ ನಿವೇಶನ ರಹಿತ ದಲಿತರಿಗೆ ನಿವೇಶನ ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ನಿವೇಶನ ಹಂಚಿಕೆ ಮಾಡಲು ಪಿಡಿಒ ನಿರ್ಲಕ್ಷ ವಹಿಸುತ್ತಿದ್ದಾರೆ. ದಲಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು’ ಎಂದರು.

ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿ ಕಲ್ಲುಕುಡಿಗೆಯಲ್ಲಿ ಬಿಜೆಪಿ ಮುಖಂಡರಾದ ಕೆ.ಸಿ.ನಾಗೇಶಭಟ್ಟ ಮತ್ತು ಕೆ.ಸಿ.ಸುಬ್ರಮಣ್ಯ ಭಟ್ಟ ಅವರು 121 ಎಕರೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿದ್ದಾರೆ. ದಲಿತರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೇಲಿ ಹಾಕಿದ್ದಾರೆ. ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುತ್ತಾರೆ. ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಕ್ರಮಕೂಗೊಳ್ಳಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.