ಚಿಕ್ಕಮಗಳೂರು: ಬಗರ್‌ಹುಕುಂ ಸಾಗುವಳಿ ಚೀಟಿ ವಿತರಣೆ ಅಕ್ರಮದ ಬಗ್ಗೆ ದಾಖಲಾಗಿದ್ದ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಸೋಮವಾರ ಮಾಜಿ ಸಚಿವ ಡಿ.ಎನ್.ಜೀವರಾಜ್ ಮತ್ತು ಸಮಿತಿಯ ಮೂವರು ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದರು.
ನಗರದ ಲೋಕಾಯುಕ್ತ ಡಿವೈಎಸ್ಪಿ ಕಚೇರಿಯಲ್ಲಿ ಸುಮಾರು ಮೂರು ಗಂಟೆ ಕಾಲ ಶಾಸಕ ಡಿ.ಎನ್.ಜೀವರಾಜ್ ಮತ್ತು ಸಮಿತಿ ಸದಸ್ಯರಾದ ಅನುಪಮ ಆಳ್ವ, ನಾಗರಾಜ್ ಪುರಾಣಿಕ್, ರಮೇಶ್ ಅವರನ್ನು ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ವಿಚಾರಣೆಗೆ ಒಳಪಡಿಸಿದರು.
ವಿಚಾರಣೆ ಎದುರಿಸಿ ಹೊರ ಬಂದ ಡಿ.ಎನ್.ಜೀವರಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ದಾಖಲೆ ಸಮೇತ ಉತ್ತರ ನೀಡಿದ್ದೇನೆ. ಇದರಲ್ಲಿ ನನ್ನ ತಪ್ಪು ಯಾವುದು ಇಲ್ಲ. ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಇದ್ದಂತೆ ಕಾಣಿಸುತ್ತಿಲ್ಲ. ಲೋಕಾಯುಕ್ತ ಅಧಿಕಾರಿಗಳು ಸಹಜವಾಗಿ ವಿಚಾರಣೆಗೆ ಕರೆದಿದ್ದಾರೆ. ಅವರ ಕರ್ತವ್ಯ ಅವರು ಮಾಡಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೂ ಹಾಜರಾಗಿ, ತನಿಖೆಗೆ ಸಹಕರಿಸುತ್ತೇನೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ತಹಸೀಲ್ದಾರರಿಂದ ಸ್ಪಷ್ಟ ಮಾಹಿತಿ ತೆಗೆದುಕೊಂಡು ಲೋಕಾಯುಕ್ತರಿಗೆ ಸಲ್ಲಿಸಿದ್ದೇನೆ. 2004ರಿಂದ ಈ ವರೆಗೆ ಒಂದೇ ಒಂದು ಸಾಗುವಳಿ ಚೀಟಿ ವಿತರಿಸಿಲ್ಲ. 2007ರಲ್ಲಿ 384 ಅರ್ಜಿಗಳಿಗೆ ಮೊದಲ ಹಂತದ ಅನುಮೋದನೆ ನೀಡಲಾಗಿದೆ. ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.
ಎರಡನೇ ಹಂತದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದು ಸ್ಥಿರೀಕರಣ ಆದ ನಂತರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಸಾರ್ವಜನಿಕ ಆಕ್ಷೇಪಣೆಗಳಿಗೆ ಅವಕಾಶ ನೀಡಿ, ನಂತರ ಸಾಗುವಳಿ ಚೀಟಿ ವಿತರಿಸಬೇಕು. ಆದರೆ ಇದಾವುದೂ ನಮ್ಮ ಅವಧಿಯಲ್ಲಿ ಆಗಿಲ್ಲ. ಹಾಗಾಗಿ ಅಕ್ರಮ ಎಸಗಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತದೆ. ತಮ್ಮ ಅವಧಿಯಲ್ಲಿ ಒಂದೇ ಒಂದು ಸಾಗುವಳಿ ಚೀಟಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
1988-89ರಲ್ಲಿ ಫಾರಂ ನಂ.50ರಲ್ಲಿ ಅರ್ಜಿ ಸ್ವೀಕರಿಸಲಾಗಿತ್ತು. 98-99 ರಲ್ಲಿ ಫಾರಂ. ನಂ.53 ರಲ್ಲಿ ಅರ್ಜಿ ಸ್ವೀಕರಿಸಲಾಗಿದೆ. ಅಂದೇ ರಿಜಿಸ್ಟರ್ ಅಂತಿಮಗೊಳಿಸಬೇಕಿತ್ತು. ಅದನ್ನು ಮಾಡದೆ 2004ರಲ್ಲಿ ನಮ್ಮನ್ನು ಕೇಳಿದರೆ ನಾವೇನು ಹೇಳಲು ಸಾಧ್ಯ? ಎಂದು ಪ್ರಶ್ನಿಸಿದರು.
ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ತಿದ್ದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೂ ಯಾರೂ ಈ ಬಗ್ಗೆ ದೂರು ನೀಡಿಲ್ಲ ಎಂದರು.
ಸುದೀರ್ಘ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಮಾಜಿ ಸಚಿವರ ರಾಜಕೀಯ ಪ್ರವೇಶ, ಬಗರ್‌ಹುಕುಂ ಸಮಿತಿಯಲ್ಲಿ ಇವರು ವಹಿಸಿರುವ ಪಾತ್ರದ ಬಗ್ಗೆ ವಿಚಾರಿಸಿದರು ಎನ್ನಲಾಗಿದೆ.
ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಮೊದಲು ಎದುರುದಾರರಿಗೂ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಬೇಕಿರುವುದರಿಂದ ವಿಚಾರಣೆಗೆ ಕರೆಸಲಾಗಿತ್ತು. ಪ್ರಕರಣ ತನಿಖೆ ಹಂತದಲ್ಲಿದ್ದು, ಮತ್ತಷ್ಟು ಮಾಹಿತಿ ಅಗತ್ಯ ಕಂಡುಬಂದರೆ ಮತ್ತೆ ವಿಚಾರಣೆಗೆ ಕರೆಯಲಾಗುವುದು. ಸಮಗ್ರ ತನಿಖೆ ಮುಗಿದ ನಂತರ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.