ADVERTISEMENT

ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಣಿ: ಕಾರ್ಣಿಕ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 6:37 IST
Last Updated 15 ಅಕ್ಟೋಬರ್ 2017, 6:37 IST

ಚಿಕ್ಕಮಗಳೂರು: ಮುಂದಿನ ವಿಧಾನಸಭೆ ಚುನಾವಣೆ, ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ ವ್ಯವಸ್ಥಿತವಾಗಿ ತಯಾರಿ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಈಗಾಗಲೇ ಮೂರು ದಿನಗಳಲ್ಲಿ 27 ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಬೈಕ್ ಜಾಥಾ, ನವ ಕರ್ನಾಟಕ ಪರಿವರ್ತನಾ ಜಾಥಾ ಆಯೋಜಿಸಲಾಗಿದೆ.

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನ.6 ಕೊನೆ ದಿನವಾಗಿದೆ. ಬಿಜೆಪಿ ಕಾರ್ಯಕರ್ತರ ಮೂಲಕ ಶಿಕ್ಷಕರ ನೋಂದಣಿ ಮಾಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ADVERTISEMENT

ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಆರು ಕ್ಷೇತ್ರಗಳಲ್ಲೂ ಅಭ್ಯರ್ಥಿಯ ಘೋಷಣೆಯಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.

ಶಿಕ್ಷಣ ಇಲಾಖೆ ಅತ್ಯಂತ ಗೌರವಯುತ ಇಲಾಖೆಯಾಗಿದೆ. ಇಂತಹ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುವುದು ಸಹಿಸಲಾಗುವುದಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಆಡಳಿತ)ನಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಎಸ್.ಜಿ.ನಾಗೇಶ್ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗೆ ಒತ್ತಡ ಹಾಕಲಾಗುವುದು ಎಂದರು.

ಎಸ್.ಜಿ.ನಾಗೇಶ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾ ಪಂಚಾಯಿತಿ ಸಭೆ ನಿರ್ಣಯಿಸಿತ್ತು. ಆದರೆ, ಸರ್ಕಾರ ಅವರನ್ನು ಹಾಸನದ ಶಿಕ್ಷಕರ ತರಬೇತಿ ಕೇಂದ್ರದ (ಡಯಟ್) ಪ್ರಾಚಾರ್ಯನಾಗಿ ವರ್ಗಾವಣೆ ಮಾಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.