ಕಡೂರು: ಮಲ್ಲೇಶ್ವರ ಸ್ವರ್ಣಾಂಬ ದೇವಾಲಯದ ಆವರಣದಲ್ಲಿರುವ ನೀರಿನ ಟ್ಯಾಂಕ್‌ನ ಕಂಬಗಳ ಕಾಂಕ್ರಿಟ್ ಕಳಚಿ ಬೀಳುತ್ತಿದ್ದು, ಇದರ ಸುತ್ತ ಸಂಚರಿಸುವವರು ಆತಂಕಗೊಳ್ಳುವಂತಾಗಿದೆ. ಟ್ಯಾಂಕ್ ಕೆಡವಲು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ 35 ವರ್ಷಗಳ ಹಿಂದೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಿಸಿದ ಟ್ಯಾಂಕ್ ಕಳಪೆ ಕಾಮಗಾರಿಯಿಂದ ಹಾಳಾಗಿ ಕಾರ್ಯನಿರ್ವಹಿಸದೆ ಪೈಪ್ ಲೈನ್ ಸಂಪರ್ಕ ತಪ್ಪಿಸಲಾಗಿದೆ. ಆನಂತರ ಗ್ರಾಮದಲ್ಲಿ ಎರಡು ದೊಡ್ಡ ಟ್ಯಾಂಕ್ ನಿರ್ಮಿಸಿ ನೀರು ಪೂರೈಸಲಾಗುತ್ತಿದೆ. ಆದರೆ ಬೀಳುವ ಹಂತ ತಲುಪಿರುವ ಟ್ಯಾಂಕ್ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ಗ್ರಾಮದ ಶ್ರೀನಿವಾಸ್.
ಇತಿಹಾಸ ಪ್ರಸಿದ್ಧ ಸ್ವರ್ಣಾಂಬ ದೇವಿಯ ರಥೋತ್ಸವ ಮತ್ತು 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಇದೇ 25 ರಿಂದ ಆರಂಭವಾಗಲಿದ್ದು ಸಾವಿರಾರು ಭಕ್ತರು ಬಂದು ಇಲ್ಲಿಯೇ ಬೀಡು ಬಿಡಲಿದ್ದಾರೆ. ಈ ವೇಳೆ ಅಹಿತಕರ ಘಟನೆ ನಡೆಯುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಟ್ಯಾಂಕ್ ಕೆಡವಿ ನಾಗರಿಕರ ಆತಂಕ ದೂರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಬಕಾರಿ ದಾಳಿ ; ನಾಲ್ಕು ಪ್ರಕರಣ ದಾಖಲು
ಮೂಡಿಗೆರೆ: ಅಬಕಾರಿ ಅಧಿಕಾರಿಗಳು ತಾಲೂಕಿನಾದ್ಯಂತ ಕಾರ್ಯಾಚರಣೆ ನಡೆಸಿ ನಾಲ್ಕು ಪ್ರರಣಗಳನ್ನು ದಾಖಲಿಸಿ ಮೂವರನ್ನು ಇತ್ತೀಚೆಗೆ ವಶಕ್ಕೆ ಪಡೆದಿದ್ದಾರೆ. ಎ.ಕೆ.ನಾಗ ರಾಜ್, ಎಂ.ಬಿ.ಕೀತಿ, ಪುಟ್ಟಸ್ವಾಮೇಗೌಡ ಬಂಧಿತರು.
ಲೋಕಸಭಾ ಉಪ ಚುನಾವಣೆ ಪ್ರಯುಕ್ತ ಮದ್ಯ ಮಾರಾಟಕ್ಕೆ ಇದೇ 17 ರಿಂದ ನಿಷೇಧವಿತ್ತು. ತಾಲೂಕಿನ ಕುನ್ನಹಳ್ಳಿ, ಮಣ್ಣಿಕೆರೆ, ಮೇಲಿನ ಕಣಚೂರಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ವರ್ತಮಾನದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು 37 ಲೀಟರ್ ಮದ್ಯ, 4 ಲೀಟರ್ ಬಿಯರ್ ಹಾಗೂ 22 ಲೀಟರ್ ಕಳ್ಳಬಟ್ಟಿ ಮತ್ತು 90 ಲೀಟರ್ ಹುಳಿರಸವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಅಬಕಾರಿ ಉಪ ಆಯುಕ್ತ ವೆಂಕಟೇಶ ಪದಕಿ ನಿರ್ದೇಶನದಲ್ಲಿ ಪ್ರಭಾರ ಉಪ ಅಧೀಕ್ಷಕ ರತ್ನಾಕರ್ ರೈ ಕೊಂಬಡ್ಕ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಇನ್‌ಸ್ಪೆಕ್ಟರ್ ಶೇಖರ್, ಪ್ರಭಾರ ಇನ್‌ಸ್ಪೆಕ್ಟರ್‌ಶಿವಾನಂದಗಟ್ಟಿ, ಸಿಬ್ಬಂದಿ ಮೋಹನ್‌ಕುಮಾರ್, ರಂಗನಾಥ್, ಶಿವಾಜಿ, ಸುಧಾಕರ್, ಪುರುಷೋತ್ತಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.