ADVERTISEMENT

`ಶಿಸ್ತು, ಬದ್ಧತೆಯಿಂದ ಯಶಸ್ಸು'

ಗ್ರಾಮಾಭಿವೃದ್ಧಿ ಸಮಾವೇಶದಲ್ಲಿ ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 10:44 IST
Last Updated 21 ಡಿಸೆಂಬರ್ 2012, 10:44 IST

ಕಳಸ:   ಆಲಸ್ಯ, ಸೋಮಾರಿತನ ಬಿಟ್ಟು ಶಿಸ್ತು, ಸಂಯಮ ಮತ್ತು ಯೋಜನಾಬದ್ಧವಾದ ಶೈಲಿಯಲ್ಲಿ ಜೀವನ ಸಾಗಿಸಿದರೆ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

  ನಮಗೆ ನಾವೇ ನೆರವಾಗಬೇಕು ಎಂಬ ಕಾರಣಕ್ಕೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 1.70 ಲಕ್ಷ ಸದಸ್ಯರು ಇದ್ದು 186 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ 26,800 ಸದಸ್ಯರು ಇದ್ದು 5.56 ಕೋಟಿ ರೂಪಾಯಿ ಉಳಿ ತಾಯ ಮಾಡಿದ್ದಾರೆ ಎಂದು ಹೆಗ್ಗಡೆ ಮಾಹಿತಿ ನೀಡಿದರು.

ಗುಟಕಾ ಮತ್ತು ಮದ್ಯಪಾನದ ಚಟ ಬಿಟ್ಟು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಹೆಗ್ಗಡೆ, ವಾರದ ಉಳಿತಾಯ, ಸಾಲದ ಕಂತು, ಜೀವನ ಮಧುರ, ಆರೋಗ್ಯ ಸುರಕ್ಷಾ ಮತ್ತು ಪಿಂಚಣಿ ಯೋಜನೆಗಳ ಮುಖಾಂತರ ಸದಸ್ಯರು ಒಟ್ಟು 5 ಬಗೆಯ ಉಳಿತಾಯ ಮಾಡಲು ಅವಕಾಶ ಇದೆ. ಯೋಜನೆಯಲ್ಲಿ ಸಾಲ ಪಡೆದವರು ಆಲಸಿಗಳಾಗದೆ ದುಡಿಮೆ ಮಾಡಿ ಕಂತು ಪಾವತಿ ಮಾಡಿರಿ ಎಂದು ಹೇಳಿದರು.

ಮೂಡಿಗೆರೆ ತಾಲ್ಲೂಕಿನಲ್ಲಿ ಸಾಲ ನೀಡಿದ್ದ 22 ಕೋಟಿ ರೂಪಾಯಿ ಮೊತ್ತದ ಪೈಕಿ 4 ಸಾವಿರ ರೂಪಾಯಿ ಹೊರತುಪಡಿಸಿ ಶೇ.99 ಮರಪಾವತಿ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಇನಾಂ ಭೂಮಿ ಸಮಸ್ಯೆ ಬಗ್ಗೆ ಸರ್ಕಾರದ ಪ್ರತಿನಿಧಿಗಳ ಜೊತೆಗೆ ಚರ್ಚೆ ನಡೆಸುವ ಭರವಸೆಯನ್ನೂ ನೀಡಿದರು.

ಸ್ವಸಹಾಯ ಸಂಘಗಳಿಗೆ ಒಟ್ಟು 28 ಲಕ್ಷ ರೂಪಾಯಿ ಲಾಭಾಂಶವನ್ನೂ ಹೆಗ್ಗಡೆ ವಿತರಿಸಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ಕಳಸದ 13 ಒಕ್ಕೂಟಗಳಿಗೆ ಎ ಶ್ರೇಣಿಯ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತನ್ನು ಹೆಗ್ಗಡೆಯವರು ಅಕ್ಷರಶಃ ಪಾಲಿಸುತಿದ್ದಾರೆ ಎಂದರು.

ಹೊರನಾಡಿನ ರಾಮನಾರಾಯಣ ಜೋಷಿ ಮಾತ ನಾಡಿದರು. ಜನಜಾಗೃತಿ ವೇದಿ ಕೆಯ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್‌ಮಾತನಾಡಿ, ಹಗ್ಗಡೆ ಯವರ  ಮಾನವೀಯ ಮೌಲ್ಯಗಳು ಜನರನ್ನು  ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುತ್ತಿವೆ ಎಂದರು.

 ಕಳಸದಲ್ಲಿ ಡಿಪ್ಲೋಮ ಕಾಲೇಜು ತೆರೆಯಬೇಕು ಎಂದು ಹೆಗ್ಗಡೆ ಅವರನ್ನು ಕೋರಿದ ತಾ.ಪಂ. ಅಧ್ಯಕ್ಷ ಎಂ.ಎ.ಶೇಷಗಿರಿ, ನಿದ್ರಾವಸ್ಥೆಯಲ್ಲಿದ್ದ ಮಲೆನಾಡಿನಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಯು ಸಂಚಲನ ತಂದಿದೆ. ಹೆಗ್ಗಡೆ ಅವರ ಕಳಕಳಿ ಮತ್ತ ದೂರದೃಷ್ಟಿ ನಮ್ಮ ಆಡಳಿತಗಾರರಿಗೆ ಇಲ್ಲ ಎಂದ ವಿಷಾದಿಸಿದರು.

ಗ್ರಾಮೀಣಾಭಿವೃದ್ಧಿ ಯೋಜನೆಯು ಮಲೆನಾ ಡಿನಲ್ಲಿ ಕಾಸು ಬಡ್ಡಿಯ ಹಾವಳಿ ನಿಯಂತ್ರಿಸಿದೆ. ಕಳಸದಲ್ಲಿ ವರ್ಷಕ್ಕೊಮ್ಮೆ ಮದ್ಯವರ್ಜನ ಶಿಬಿರ ನಡೆಸುವ ಅಗತ್ಯ ಇದೆ ಎಂದು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಹೇಳಿದರು. ಸಂಘದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು. ಜಿ.ಪಂ. ಸದಸ್ಯೆ ಕವಿತಾ ಚಂದ್ರು, ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ವರ್ಧಮಾನಯ್ಯ, ನಾಗರತ್ನ, ಲಕ್ಷ್ಣಣ್ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.