ADVERTISEMENT

ಶೃಂಗೇರಿ ಶಾರದಾ ಮಠಕ್ಕೆ ದೇವೇಗೌಡ ಭೇಟಿ

ಭಾರತೀ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 7:27 IST
Last Updated 30 ಮಾರ್ಚ್ 2018, 7:27 IST

ಶೃಂಗೇರಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಗುರುವಾರ ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿದರು. ಎರಡು ತಿಂಗಳ ಹಿಂದೆ ಮಠದಲ್ಲಿ ಅತಿರುದ್ರ ಮಹಾಯಾಗವನ್ನು ಕುಟುಂಬ ಸಮೇತ ನೆರವೇರಿಸಿದ್ದ ಗೌಡರು, ನರಸಿಂಹವನದ ಗುರುನಿವಾಸಕ್ಕೆ ಮತ್ತೆ ಭೇಟಿ ನೀಡಿ ಭಾರತೀ ತೀರ್ಥ ಸ್ವಾಮೀಜಿ ಅವರಿಂದ ಆರ್ಶೀವಾದ ಪಡೆದರು.

‘ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯಬೇಕಿದೆ. ತಾವು ನಮ್ಮನ್ನು ಆಶೀರ್ವದಿಸಬೇಕು’ ಎಂದು ದೇವೇಗೌಡರು ಸ್ವಾಮೀಜಿ ಅವರನ್ನು ಕೇಳಿದರು. ಮಠದ ಎಲ್ಲ ಭಕ್ತರಿಗೆ ಶಾರದಾಂಬೆಯ ಅನುಗ್ರಹ ನಿರಂತರವಾಗಿರುತ್ತದೆ ಎಂದು ಗುರುಗಳು ಈ ಸಂದರ್ಭದಲ್ಲಿ ಹೇಳಿದರು. ಬಳಿಕ ಗುರು ನಿವಾಸದಲ್ಲಿ ಭಾರತಿತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರ ಒಟ್ಟಿಗೆ ಇರುವ ಪೋಟೋವನ್ನು ದೇವೇಗೌಡರು ನೋಡಿ, ‘ಇದು ನನ್ನೊಂದಿಗೆ ಇದ್ದರೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರುತ್ತದೆ’ ಎಂದು ಹೇಳಿ ಪೋಟೋವನ್ನು ಗುರುಗಳಿಂದ ಕೇಳಿ ಪಡೆದರು.

ನಂತರ ಶಾರದಾಂಬೆ, ತೋರಣ ಗಣಪತಿ, ಬೆಟ್ಟದ ಮಲಹಾನಿಕರೇಶ್ವರ, ಕಾಳಿಕಾಂಬ, ತೋರಣ ಗಣಪತಿ, ದೇವಾಲಯಗಳಿಗೂ ದೇವೇಗೌಡರು ಭೇಟಿ ನೀಡಿದರು.ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಜಿ.ವೆಂಕಟೇಶ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ವಸಂತ ಕುಮಾರ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷೆ ಪುಪ್ಪಾ ಲಕ್ಷ್ಮೀನಾರಾಯಣ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ ರಂಜನ್ ಅಜಿತ್‌ ಕುಮಾರ್, ಕ್ಷೇತ್ರಾಧ್ಯಕ್ಷ ದಿವಾಕರ ಭಟ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಜಿ.ಜಿ.ಮಂಜುನಾಥ್, ಜೆಡಿಎಸ್ ವಕ್ತಾರ ಹೆಗ್ಗದ್ದೆ ಶಿವಾನಂದ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.