ADVERTISEMENT

`ಶೋಷಿತ ವರ್ಗಕ್ಕೆ ಸಮಾನತೆ ಸಿಗಲಿ'

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 6:29 IST
Last Updated 15 ಏಪ್ರಿಲ್ 2013, 6:29 IST

ಬೀರೂರು: ಶತಮಾನಗಳಿಂದ ತುಳಿತಕ್ಕೆ ಒಳಗಾದ ಶೋಷಿತ ವರ್ಗಗಳಿಗೆ ಇನ್ನೂ ಸಮಾನತೆ ದೊರೆತಿಲ್ಲ ಎಂದು ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘದ ಅಧ್ಯಕ್ಷ ಎನ್.ಬಿ.ಷಣ್ಮುಖಪ್ಪ ದೂರಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 122ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾನುವಾರ ಅವರು ಮಾತನಾಡಿದರು.

`ಭಾರತ ದೇಶದ ಮೂಲನಿವಾಸಿಗಳು ಆಳುವ ವರ್ಗವಾಗಬೇಕು. ಈ ದೇಶ ಮತ್ತೆ ಸ್ವಾತಂತ್ರ್ಯ ಕಳೆದುಕೊಂಡರೆ ಅದು ಅಸಮಾನತೆಯ ಮುಂದುವರಿಕೆಯ ಸಂಕೇತ' ಎಂಬ ಡಾ.ಅಂಬೇಡ್ಕರ್ ಅವರ ನುಡಿಗಳು ಇಂದಿಗೂ ಪ್ರಸ್ತುತವಾಗಿದ್ದು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲದೆ, ಔದ್ಯೋಗಿಕ, ರಾಜಕೀಯ ಕ್ಷೇತ್ರಗಳಲ್ಲಿ ದಮನಿತ ವರ್ಗಗಳಿಗೆ ಸಮಾನತೆ ದೊರೆಯಬೇಕು. ಮಹಿಳಾ ಸಬಲೀಕರಣದ ಮೂಲಕ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಶೇ.50ರಷ್ಟು ಮೀಸಲಾತಿ ದೊರೆಯಬೇಕು.

ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೋರಾಟ ಮಾಡದೇ ಏನನ್ನೂ ಗಳಿಸಲು ಸಾಧ್ಯವಿಲ್ಲ. ಹಾಗೆಯೇ ದಲಿತ ವರ್ಗಗಳ ಪರಿಸ್ಥಿತಿಯೂ ಇದೆ. ಈ ಪರಿಸ್ಥಿತಿ ತಡೆಗಟ್ಟಲು ಈಗಲೂ ಅನಿವಾರ್ಯವಾಗಿ ಹೋರಾಟದ ಹಾದಿಯನ್ನೇ ಹಿಡಿಯಬೇಕಿರುವುದು ಬೇಸರದ ಸಂಗತಿ. ಸಾಂವಿಧಾನಿಕ ಹಕ್ಕನ್ನು ಹೋರಾಟದ ಮೂಲಕವೇ ಪಡೆಯೋಣ ಮತ್ತು ಬಾಬಾಸಾಹೇಬರ ಆದರ್ಶಗಳನ್ನು ಬಲಗೊಳಿಸೋಣ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಈಶ್ವರಪ್ಪ, ಸಂಘದ ಪ್ರಧಾನಕಾರ್ಯದರ್ಶಿ ಬಿ.ಮಲ್ಲೇಶ್,ಸದಸ್ಯರಾದ ವೀರಭದ್ರಪ್ಪ, ಮಲ್ಲಿಕಾರ್ಜುನ, ಕೊಬ್ಬರಿ ಮಂಜು, ರವಿಚಂದ್ರ, ಕೋಟೇಶ್, ರವಿ, ಅಯ್ಯುಬ್, ಪ್ರದೀಪ್ ಮುಂತಾದವರು  ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.