ADVERTISEMENT

`ಸಂಚಾರ ಭತ್ಯೆ ಆದೇಶ ಜಾರಿಯಾಗಲಿ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:57 IST
Last Updated 27 ಡಿಸೆಂಬರ್ 2012, 6:57 IST

ಚಿಕ್ಕಮಗಳೂರು: ಆರನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರ ಅಂಗವಿಕಲ ನೌಕರರಿಗೆ ನೀಡಬೇಕಾಗಿರುವ ಮೂಲವೇತನದ ಶೇ. 6ರಷ್ಟು ಸಂಚಾರಿ ಭತ್ಯೆ ನೀಡುವ ಆದೇಶವನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ಅಂಗವಿಕಲರ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ  ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದರು.

ಇತ್ತೀಚೆಗೆ ನಗರದ ಗುರುಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಅಂಗವಿಕಲರ ನೌಕರರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
6ನೇ ವೇತನ ಆಯೋಗ ಎಲ್ಲಾ ಶಿಫಾರಸುಗಳನ್ನು ಜಾರಿ ಮಾಡಲಾಗಿದೆ. ಆದರೆ ಸರ್ಕಾರಿ ಅಂಗವಿಕಲ ನೌಕ ರರಿಗೆ ನೀಡಬೇಕಾಗಿರುವ ಮೂಲ ವೇತನ ಶೇ. 6ರಷ್ಟು ಸಂಚಾರಿ ಭತ್ಯೆಯನ್ನು ಜಾರಿ ಗೊಳಿಸಲು  ವಿಳಂಬ ನೀತಿ ಅನುಸರಿಸುತ್ತಿದೆ.
ಸಚಿವರಾದ ಕಾಗೇರಿ ಮತ್ತು ಆನಂದ್‌ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಈ ವಿಷಯ ಕುರಿತು ಬೆಂಗಳೂರಿನಲ್ಲಿ  ರಾಜ್ಯಮಟ್ಟದ ಧರಣಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಮಾದರಿಯಲ್ಲಿ  1995ರ ಅಂಗವಿಕಲರ ಅಧಿನಿಯಮವನ್ನು ಪೂರ್ಣಪ್ರಮಾಣದಲ್ಲಿ  ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗವಿಕಲರ ಅಧಿನಿಯಮ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಲ್ಲಿ  ಅಂಗವಿಕಲ ನೌಕರರ ಅನೇಕ ಸಮಸ್ಯೆಗಳು ಬಗೆಹರಿಯಲಿವೆ. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆಯಲ್ಲಿ ಅಂಗವಿಕಲ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಮನವಿ ಮಾಡಿದರು.

ನಿರುದ್ಯೋಗ ವಿಕಲಾಂಗರಿಗೆ ಅದರಲ್ಲೂ ಶೇಕಡವಾರು ಅಂಗವೈಕಲ್ಯ ಆಧಾರದ ಮೇಲೆ ವಿಂಗಡಿಸಿ ನೀಡುವ ಬದಲು ಸಮಾನವಾಗಿ ಏಕರೂಪ ಅಂಗವಿಕಲ ಮಾಸಾಶನ ನೀಡಬೇಕು ಎಂದರು.

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುವ  ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.  ಜಿಲ್ಲಾಧ್ಯಕ್ಷ ಬಿ.ಎಂ.ದೇವರಾಜು, ಗೌರವಾಧ್ಯಕ್ಷ ಕೆ.ಮಂಜಪ್ಪ, ಜಿಲ್ಲಾ  ಪ್ರಧಾನ ಕಾರ್ಯದರ್ಶಿ,ಮಲ್ಲೇಶಪ್ಪ, ನೇಮಿರಾಜ, ವೀರಭದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.