ADVERTISEMENT

ಸಂಸ್ಕಾರದ ಬದುಕು-ಗ್ರಾಮಾಭಿವೃದ್ಧಿ ಉದ್ದೇಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 9:20 IST
Last Updated 21 ಫೆಬ್ರುವರಿ 2011, 9:20 IST

ನರಸಿಂಹರಾಜಪುರ: ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಉದ್ದೇಶ ಕೇವಲ ಹಣಕಾಸಿನ ವ್ಯವಹಾರ ಅಲ್ಲ ಬದಲಿಗೆ ಸಂಸ್ಕಾರಯುತ ಕುಟುಂಬ ನಿರ್ಮಾಣ ಮಾಡುವುದಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಜಿಲ್ಲಾ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ ತಿಳಿಸಿದರು.ಇಲ್ಲಿನ ಕೃಷಿ ಭವನದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕಸಬಾ ಹೋಬಳಿ ಮತ್ತು ನಾಗ ಲಾಪುರ ಒಕ್ಕೂಟಗಳ ನೂತನ ಪದಾಧಿಕಾರಿ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಈ ಯೋಜನೆ 13 ಜಿಲ್ಲೆಗಳ 41 ನಗರಗಳಲ್ಲಿ, 5,800 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1,30 ಲಕ್ಷ ಸ್ವಸಹಾಯ ಸಂಘಗಳಿದ್ದು, 13ಲಕ್ಷ ಸದಸ್ಯರಿದ್ದಾರೆ ಎಂದರು.
ರೂ.2 ಸಾವಿರ ಕೋಟಿ ಪ್ರಗತಿ ನಿಧಿ ಸಾಲ ವಿತರಿಸಲಾಗಿದೆ ಎಂದರು.ತಾಲ್ಲೂಕಿನ ವ್ಯಾಪ್ತಿಯ ಪ್ರಗತಿಬಂಧು ಸಂಘಗಳಲ್ಲಿ 953 ಸದಸ್ಯರಿದ್ದು, ರೂ.2 ಕೋಟಿ ವ್ಯವಹಾರ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ರೂ.280 ಕೋಟಿ ಸಾಲ ನೀಡಲಾಗಿದೆ.

ಮುಂದಿನ ವರ್ಷ ರೂ.150 ಕೋಟಿ ಪ್ರಗತಿ ನಿಧಿ ನೀಡುವ ವಾರ್ಷಿಕ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.ಸಮುದಾಯ ಕಾರ್ಯಕ್ರಮ, ಉನ್ನತ ಶಿಕ್ಷಣಕ್ಕೆ ಮಾಸಿಕ ವಿದ್ಯಾರ್ಥಿ ವೇತನ ನೀಡುವ ಸುಜ್ಞಾನ ನಿಧಿ ವೇತನ ಕಾರ್ಯ ಕ್ರಮ, ‘ಜೀವನಮಧುರ’ ಎಂಬ ಜೀವ ವಿಮಾ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 45ಸಾವಿರ ಬಾಟಲಿ ಗಳಷ್ಟು ಮದ್ಯ ಮಾರಾಟವಾಗುತ್ತಿದ್ದು, ವರ್ಷಕ್ಕೆ ರೂ.200 ಕೋಟಿ ಇದಕ್ಕೆ ವೆಚ್ಚವಾಗುತ್ತಿದೆ. ಹಾಗಾಗಿ ಮದ್ಯಪಾನ ದಂತಹ ದುಶ್ಚಟದಿಂದ ದೂರ ಉಳಿಯ ಬೇಕು ಎಂದರು.

ಅಧ್ಯಕ್ಷತೆಯನ್ನು ಎನ್.ಆರ್.ಪುರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಉಷಾ ರವಿಶಂಕರ್ ವಹಿಸಿದ್ದರು. ರೋಟರಿ ಅಧ್ಯಕ್ಷ ಎಚ್.ಆರ್. ದಿನೇಶ್, ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್‌ಫಾರೂಕ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ, ಒಕ್ಕೂಟದ ನೂತನ ಅಧ್ಯಕ್ಷೆ ಶಶಿಕಲಾ, ನಾಗಲಾಪುರ ಒಕ್ಕೂಟದ ಬಿ.ಅರವಿಂದ ಆಚಾರ್, ಅನ್ನಪೂರ್ಣ, ರಾಮಚಂದ್ರ, ದಯಾನಂದ, ಸಾವಿತ್ರಿ, ಅನಿತಾ, ಹೇಮಲತಾ, ಶಿಬಾ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.