ADVERTISEMENT

ಸಖರಾಯಪಟ್ಟಣದ ಪ್ರೀತಂಗೆ 654 ನೇ ರ‍್ಯಾಂಕ್‌

ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 8:55 IST
Last Updated 28 ಏಪ್ರಿಲ್ 2018, 8:55 IST
ಪ್ರೀತಂ.ಎಸ್‌
ಪ್ರೀತಂ.ಎಸ್‌   

ಚಿಕ್ಕಮಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಸಿಎಸ್‌) ನಡೆಸಿದ ಪರೀಕ್ಷೆಯಲ್ಲಿ ಕಡೂರು ತಾಲ್ಲೂಕಿನ ಸಖರಾಯ ಪಟ್ಟಣದ ಪ್ರೀತಂ.ಎಸ್‌ ಅವರು 654ನೇ ರ‍್ಯಾಂಕ್‌ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರೀತಂ ಅವರು ಚಿಕ್ಕಮಗಳೂರಿನ ಕಾಫಿ ಮಂಡಳಿಯ ಉದ್ಯೋಗಿ ಶಿವಮೂರ್ತಿ ಮತ್ತು ಯಶೋಧಾಮೂರ್ತಿ ದಂಪತಿ ಪುತ್ರ. ಪ್ರೀತಂ ಬೆಂಗಳೂರಿನ ಆರ್‌.ವಿ ಕಾಲೇಜಿನಲ್ಲಿ ಬಿ.ಇ (ಕಂಪ್ಯೂರ್‌ ಸೈನ್ಸ್‌) ಪದವಿ ಪಡೆದಿದ್ದಾರೆ.

ಪ್ರೀತಂ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಎಂಜಿನಿ ಯರಿಂಗ್‌ ವ್ಯಾಸಂಗ ಮಾಡುತ್ತಿರುವಾಗಲೇ ಯುಪಿಎಸ್‌ಸಿ ಪರೀಕ್ಷೆಯ ಗುರಿ ಇಟ್ಟುಕೊಂಡಿದ್ದೆ. ರ‍್ಯಾಂಕ್‌ ಬರುತ್ತೆ ಎಂದುಕೊಂಡಿದ್ದೆ. ಅದು ಸಾಕಾರವಾಗಿದೆ. ಯಶಸ್ಸು ಸಾಧಿಸಲು ಪೋಷಕರೇ ಪ್ರೇರಣೆ’ ಎಂದು ಸಂತಸ ಹಂಚಿಕೊಂಡರು.

ADVERTISEMENT

‘ಎರಡನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಸಾಧಿಸಿದ್ದೇನೆ. ಎರಡು ವರ್ಷಗಳಿಂದ ತಯಾರಿ ನಡೆಸಿದ್ದೆ. ಮುಖ್ಯಪರೀಕ್ಷೆಗೆ ಮಾನವಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ನವದೆಹಲಿಯಲ್ಲಿ ಕೋಚಿಂಗ್‌ ಪಡೆದಿದ್ದೆ. ದಿನಕ್ಕೆ 6 ರಿಂದ 8 ಗಂಟೆ ಅಧ್ಯಯನ ಮಾಡುತ್ತಿದ್ದೆ. ಪರಿಶ್ರಮ ಫಲ ನೀಡಿದೆ’ ಎಂದು ಸಾಧನೆಯ ಹಾದಿ ತಿಳಿಸಿದರು.

‘ಈ ಪರೀಕ್ಷೆ ಪಾಸು ಮಾಡಿದ ಊರಿನ ಮೊದಲಿಗ ನಾನು. ಇದು ಬಹಳ ಖುಷಿ ತಂದಿದೆ. ಎರಡು ವರ್ಷಗಳಿಂದ ಪೂರ್ಣವಾಗಿ ಯುಪಿಎಸ್‌ಸಿ ಪರೀಕ್ಷೆಗೆ ಗಮನ ಕೇಂದ್ರೀಕರಿಸಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.