ADVERTISEMENT

ಸಗ್ಗದ ಸಿರಿ ಬಂತೋ ನಮ್ಮೂರಿಗೆ

ಎನ್.ವಾಸುದೇವ್
Published 23 ಜೂನ್ 2013, 6:53 IST
Last Updated 23 ಜೂನ್ 2013, 6:53 IST

ಮಳೆಗಾಲ ಪ್ರಾರಂಭವಾಯಿತೆಂದರೆ ಮಲೆನಾಡಿನಲ್ಲಿ ಸ್ವರ್ಗದ ಸಿರಿ. ಒಂದೆಡೆ ಘಮಘಮಿಸುವ ಹಲಸಿನ ಹಣ್ಣುಗಳು ಮಲೆನಾಡಿಗರ ಬಾಯಲ್ಲಿನ ನೀರ ತಣಿಸಿದರೆ, ಇನ್ನೊಂದೆಡೆ ಮೃಷ್ಟನ್ನ ಬೋಜನಕ್ಕೂ ಸೆಡ್ಡು ಹೊಡೆಯುವ ಕಳಿಳೆ, ಏಡಿ, ಗದ್ದೆ ಮೀನು ಸಾರುಗಳು ಸಂಭ್ರಮಿಸುವ ಕಾಲವಿದು. ಅದರಿಂದಲೇ ಏನೋ ಮಳೆಗಾಲ ಪ್ರಾರಂಭವಾಯಿತೆಂದರೆ ಇಲ್ಲಿನ ಜನತೆಗೆ ಸ್ವರ್ಗವೇ ಧರೆಗಿಳಿದಂತಾಗುತ್ತದೆ. ಮೂರು ತಿಂಗಳ ಕಾಲ ವಿಶ್ರಾಂತಿ ಪಡೆದ ರೈತರು ಗದ್ದೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ನಾಟಿ ಕಾರ್ಯಕ್ಕೆ ಸಜ್ಜಾದರೆ, ವರ್ಷವಿಡೀ ಸೇವೆಯಲ್ಲಿ ಮಗ್ನವಾಗುವ ದನಕರುಗಳು ಉಳುಮೆಯಲ್ಲಿ ಅನ್ನದಾತನಿಗೆ ನೆರವಾಗಿ ಋಣ ತೀರಿಸಲು ಉತ್ಸುಕವಾಗುತ್ತವೆ. ಇಂತಹ ಕಾಲದಲ್ಲಿ ಮಲೆನಾಡಿನ ಮಡಿಲಾದ ಮೂಡಿಗೆರೆ ತಾಲ್ಲೂಕಿನ ವಿವಿಧ ಪ್ರಕೃತಿ ತಾಣಗಳು ಸುರಿಯುವ ಮಳೆಯ ನಡುವೆ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ಪ್ರಕೃತಿ ಪ್ರಿಯರ ಮನ ತಣಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡತೊಡಗಿವೆ.

ರಾಜ್ಯದಲ್ಲಿ ಮೂಡಿಗೆರೆ ಎಂದೊಡನೆ ತಟ್ಟನೆ ನೆನಪಾಗುವುದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಚಾರ್ಮಾಡಿಘಾಟ್ ರಸ್ತೆ. ಹೌದು ಇದು ಪ್ರಕೃತಿಯ ರಮ್ಯ ತಾಣ. ಎಂಥಹ ಕಟು ಮನಸಿನವರೂ ಈ ರಸ್ತೆಯಲ್ಲಿ ಸಾಗುವಾಗ ಒಮ್ಮೆ ಪ್ರಕೃತಿಯ ಸೊಬಗನ್ನು ಕಂಡು ಬೆರಗಾಗದೇ ಇರರು. ಯಾವ ಋತುವಿನಲ್ಲಿ ನೋಡಿದರೂ, ಹಚ್ಚಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೊಬಗು, ಮುಗಿಲೆತ್ತರಕ್ಕೆ ಎದ್ದು ನಿಂತಿರುವ ಬೆಟ್ಟಗುಡ್ಡಗಳು ಪ್ರವಾಸಿಗರನ್ನು ಬೆರಗುಗೊಳಿಸಿದರೆ, ಇದಕ್ಕೆ ಕಿರೀಟವಿಟ್ಟಂತೆ ಘಾಟಿಯ ನಡುನಡುವೆ ಸಿಗುವ ಸಣ್ಣ-ಪುಟ್ಟ ತೊರೆಗಳು ಹಾಲ್ನೊರೆಯನ್ನು ಸುರಿಸುತ್ತಾ ಕಂಗೊಳಿಸುತ್ತಿವೆ.

ಘಾಟ್ ರಸ್ತೆಯ ಪ್ರಾರಂಭದಲ್ಲಿಯೇ ಮಲಯ ಮಾರುತದ ಬಳಿ ಧುಮ್ಮಿಕ್ಕುವ ನೀರಿನ ರಮ್ಯ ನೋಟವನ್ನು ನೋಡಲು ಕಣ್ಣೆರಡು ಸಾಲದು. ಅಲ್ಲಿಂದ ಕೆಲವೇ ಫರ್ಲಾಂಗು ಕ್ರಮಿಸಿದರೆ ನೂರಾರು ಅಡಿಗಳ ಕಂದಕಗಳಲ್ಲಿ ಬೆಳೆದು ನಿಂತಿರುವ ಹಸಿರು ಸಸ್ಯಕಾಶಿಯ ನಡುವೆ ನಿರ್ಮಾಣವಾಗುವ ಮಂಜಿನ ಮನೋಹರದೃಶ್ಯ ಮಲೆನಾಡು ಸ್ವರ್ಗದ ಬೀಡು ಎಂಬುದನ್ನು ರುಜುವಾತು ಪಡಿಸುವಂತಿದೆ. ಸಮೀಪದಲ್ಲಿಯೇ ಸಿಗುವ ಆಲೆಖಾನ್ ಹೊರಟ್ಟಿಯ ತಿರುವಿನಲ್ಲಿನ ಜಲಪಾತ ಬೆರಗು ಮೂಡಿಸುವಂತಿದ್ದು, ರಸ್ತೆಯ ಬದಿಯಲ್ಲಿಯೇ ಇರುವ ಅಣ್ಣಪ್ಪಸ್ವಾಮಿ ದೇವಾಲಯ ಪ್ರವಾಸಿಗರು ವಿರಮಿಸಬಹುದಾದ ತಾಣವಾಗಿದೆ. ದೇವಾಲಯದಿಂದ ಕೆಲವೇ ಅಣತಿ ದೂರದಲ್ಲಿ ಮತ್ತೊಂದು ತೊರೆ ಹರಿಯುವ ಜಾಗವಿದ್ದು, ವಿಶಾಲ ಕಲ್ಲು ಬಂಡೆಯ ಮೇಲೆ ಕ್ಷೀರ ಸಾಗರದಂತೆ ಹರಡಿ ಕಂಗೊಳಿಸುವ ಈ ಝರಿಯನ್ನು ಪ್ರತಿ ದಾರಿ ಹೋಕರೂ ಆನಂದಿಸುವ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ಈ ತೊರೆಗಳ ಬಳಿಯಲ್ಲಿ ಕಾಣ ಸಿಗುವ ಮಂಗಗಳು, ಸಿಂಗಳೀಕಗಳು ಪ್ರವಾಸಿಗರ ಮನ ತಣಿಸುತ್ತವೆ. ಇವೆಲ್ಲವೂ ಚಾರ್ಮಾಡಿ ರಸ್ತೆಯ ಬದಿಯಲ್ಲಿ ಸಿಗುವ ತಾಣಗಳಾಗಿದ್ದು, ಖಾಸಗಿ ವಾಹನದಲ್ಲಿ ತೆರಳುವ ಪ್ರತಿಯೊಬ್ಬರೂ ಉಚಿತವಾಗಿ ಸವಿಯಬಹುದಾದ ಪ್ರಕೃತಿಯ ಸೊಬಗಾಗಿದೆ. ಮನುಷ್ಯನಿಗೆ ಪ್ರಕೃತಿ ನೀಡಿರುವ ಇಂತಹ ರಮ್ಯ ತಾಣ ಇಂದು ಕೆಲವು ಕಿಡಿಗೇಡಿಗಳ ಹಿಡಿತಕ್ಕೆ ಸಿಲುಕಿ ಮಲಿನವಾಗುತ್ತಿದ್ದು, ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಘಾಟ್ ನಡುವೆ ಏನೇ ಅನಾಹುತಗಳು ಸಂಭವಿಸಿದರೂ ತಕ್ಷಣ ಮಾಹಿತಿ ನೀಡಲು ನೆರವಾಗುವಂತೆ ಮೊಬೈಲ್ ಸಿಗ್ನಲ್‌ಗಳನ್ನು ಅಳವಡಿಸಬೇಕು, ಘಾಟಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಗಸ್ತು ಪಡೆಯನ್ನು ನಿಯೋಜಿಸಿ ಜನರಲ್ಲಿ ಭಯದ ವಾತಾವಾರಣ ಮೂಡದಂತೆ ಕ್ರಮ ಕೈಗೊಂಡು ಪ್ರಕೃತಿಯ ಸೊಬಗನ್ನು ನಾಡಿನ ಜನತೆ ಆತಂಕವಿಲ್ಲದೇ ಸವಿಯುವಂತಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.