ADVERTISEMENT

`ಸಚಿವ ಸಿ.ಟಿ.ರವಿಗೆ ಅಧಿಕಾರದ ಅಮಲು'

ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಧನಂಜಯಕುಮಾರ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:29 IST
Last Updated 3 ಡಿಸೆಂಬರ್ 2012, 8:29 IST

ಚಿಕ್ಕಮಗಳೂರು: `ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶ ಮತ್ತು ಬೆಳಗಾವಿಯ ಅಧಿವೇಶನದ ನಂತರ ಬಿಜೆಪಿಯಲ್ಲಿ ಉಳಿಯುವವರ ಸಂಖ್ಯೆ ಎಣಿಸಲು ಸುಲಭವಾಗಲಿದೆ. ಈಗಾಗಲೇ ಬಿಜೆಪಿಯ ದಿನಗಳು ಮುಗಿಯುತ್ತಿವೆ' ಎಂದು ಕೆಜೆಪಿ ರಾಜ್ಯ ಅಧ್ಯಕ್ಷ ವಿ.ಧನಂಜಯಕುಮಾರ್ ಹೇಳಿದರು.

ತಾಲ್ಲೂಕಿನ ಬೆಳವಾಡಿಯಲ್ಲಿ ಭಾನುವಾರ ನಡೆದ ಹಾವೇರಿ ಸಮಾವೇಶದ ಪೂರ್ವಭಾವಿ ಸಭೆ ಮತ್ತು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

`ನಮ್ಮ ಪಕ್ಷಕ್ಕೆ ಬಿಜೆಪಿಯಿಂದ ಎಷ್ಟು ಮಂದಿ ಬರಲಿದ್ದಾರೆ? ಎಂದು ಮಾಧ್ಯದವರೂ ಕೇಳುತ್ತಿದ್ದಾರೆ. ಬೆಳಗಾವಿ ಅಧಿವೇಶನ ಮುಗಿದ ಮೇಲೆ ಬಿಜೆಪಿಯಲ್ಲಿ ಬೆರಳೆಣಿಕೆ ಮಂದಿ ಉಳಿಯಲಿದ್ದಾರೆ. ಆ ಪಕ್ಷದ ಒಂದೊಂದು ಕ್ಷೇತ್ರದ ಜನಪ್ರತಿನಿಧಿಗಳು ಯಾವ ಕಡೆಗೆ ಹೋಗುವುದೆಂಬ ಲೆಕ್ಕ ಹಾಕುತ್ತಿದ್ದಾರೆ. ಯಡಿ ಯೂರಪ್ಪ ಇಲ್ಲದ ಬಿಜೆಪಿ ಈಗಾಗಲೇ ಸೊರಗಿ ಹೋಗಿದೆ. ಆ ಪಕ್ಷದ ಕಾರ್ಯಕರ್ತರ ಉತ್ಸಾಹ ಇಲ್ಲ ವಾಗಿದೆ. ಅಧಿವೇಶನ ಮುಗಿದ ಮೇಲೆ ಬಿಜೆಪಿಯಲ್ಲಿ ಉಳಿಯುವವರ ಸಂಖ್ಯೆಯನ್ನು ಸುಲಭವಾಗಿ ಲೆಕ್ಕ ಮಾಡಬಹುದು' ಎಂದು ವ್ಯಂಗ್ಯವಾಡಿದರು.

`ಸಚಿವ ರವಿ ಇನ್ನೂ ತುಂಬಾ ಚಿಕ್ಕವರು. ಬುದ್ಧಿ ಬೆಳೆಯಬೇಕಿದೆ. ಅಧಿಕಾರದ ಅಮಲಿನಲ್ಲಿ ಯಡಿಯೂರಪ್ಪ ಅವರನ್ನು ಟೀಕಿಸುತ್ತಿದ್ದಾರೆ. ಶಾಸಕ, ಸಚಿವನಾಗಲು ನಾಯಕರ ಕಾಲು ಹಿಡಿದಿದ್ದದನ್ನು  ಮರೆತಿದ್ದಾರೆ.  ಯಾರನ್ನೋ ಖುಷಿಪಡಿಸುವ ಉಮೇದಿನಲ್ಲಿ ಯಡಿಯೂರಪ್ಪ ಅವರನ್ನು ಟೀಕಿಸುವುದನ್ನು ನಿಲ್ಲಿಸದಿದ್ದರೆ ನಮ್ಮ ಪಕ್ಷದ ಯುವಕರು ಸಿಡಿದೇಳುತ್ತಾರೆ. ಆಗ ಆಗುವ ಅನಾಹುತಕ್ಕೆ ನಾವು ಹೊಣೆಯಲ್ಲ. ನಿಮ್ಮ ರಾಜಕೀಯ ಆರೋಗ್ಯ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಟೀಕೆ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು ಸಚಿವರಿಗೆ ಎಚ್ಚರಿಕೆ ನೀಡಿದರು.

ತಮ್ಮ ಭಾಷಣ ನಡೆಯುತ್ತಿರುವಾಗಲೇ ವೇದಿಕೆ ಮುಂದೆ ಘೋಷಣೆ ಕೂಗುತ್ತಾ ಬಿಜೆಪಿ ವಿಕಾಸ ಯಾತ್ರೆ ಸಾಗಿ ಹೋದಾಗ `ಚಿಕ್ಕ ಮಕ್ಕಳು ಮೆರವಣಿಗೆ ಹೋಗುತ್ತಿರುವುದು ಕಾಣಿಸುತ್ತಿದೆ. ಅವರತ್ತ ಗಮನ ಹರಿಸಬೇಡಿ' ಎಂದು ಮೆರವಣಿಗೆಯತ್ತ ದೃಷ್ಟಿ ಹರಿಸಿದ ಸಭಿಕರಿಗೆ ಹೇಳಿದರು.  ಪಕ್ಷದ ಯುವ ಘಟಕದ ರಾಜ್ಯ ಮುಖಂಡ ರವಿ ಕುಮಾರ್ ರಾಯಸಂದ್ರ ಮಾತನಾಡಿ, ಯಡಿಯೂರಪ್ಪ ಅವರ ಬೆನ್ನಿಗೆ ಚೂರಿ ಹಾಕಿದವರಲ್ಲಿ ಉನ್ನತ ಶಿಕ್ಷಣ ಸಚಿವರು ಸೇರಿದ್ದಾರೆ. ಅವರನ್ನು ಶಾಶ್ವತವಾಗಿ ಮಾಜಿಯಾಗಿಸುವುದೇ ನಮ್ಮ ಏಕೈಕ ಗುರಿ ಎಂದು ಕಿಡಿಕಾರಿದರು. ತಮ್ಮ ಭಾಷಣದುದ್ದಕ್ಕೂ ಸಚಿವರ ತೇಜೋವಧೆ ಮಾಡಲು ಏಕವಚನ, ಅಸಾಂವಿಧಾನಿಕ ಪದಪ್ರಯೋಗ ಮಾಡಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಸೆಬಾಸ್ಟಿಯನ್ ಆಂಟೋನಿ, ಮುಖಂಡರಾದ ಡಿ.ಎಸ್.ಅಶೋಕ್, ಭುಜೇಂದ್ರ ಬಳ್ಳೆಕೆರೆ, ತೇಜಸ್ ಕುಮಾರ್, ಬಸವರಾಜ್ ಕಬ್ಬಳ್ಳಿ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT