ADVERTISEMENT

ಸಮಾಜ ಒಡೆಯುವುದೇ ಬಿಜೆಪಿ ಪ್ರವೃತ್ತಿ: ಶಂಕರ್ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 9:55 IST
Last Updated 1 ಮಾರ್ಚ್ 2012, 9:55 IST

ಚಿಕ್ಕಮಗಳೂರು: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ, ಭಾವ ಬಿತ್ತಿ ಸಮಾಜವನ್ನ ಒಡೆಯುವುದು ಬಿಜೆಪಿ ಪ್ರವೃತ್ತಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಆರೋಪಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಧವಾರ ನಗರದಲ್ಲಿ ಆರಂಭಿಸಿದ ಕೆಪಿಸಿಸಿ ಚುನಾವಣಾ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದತ್ತ ಪೀಠದಂತಹ ಭಾವೈಕ್ಯ ಕೇಂದ್ರವನ್ನು ವಿವಾದಾತ್ಮಕ ಕೇಂದ್ರವನ್ನಾಗಿಸಿ, ಹಿಂದೂ ಮುಸ್ಲಿಮರ ಭಾವನೆ ಕೆದಕಿದ ಮತ್ತು ಅದರಿಂದ ಶಾಸಕರಾದ ಕೀರ್ತಿ ಸುನೀಲ್ ಕುಮಾರ್‌ಗೆ ಸಲ್ಲುತ್ತದೆ ಎಂದು ಟೀಕಿಸಿದರು.

ಜೆಡಿಎಸ್ ರಾಜ್ಯದಲ್ಲಿ ರಾಜಕೀಯ ವ್ಯಾಪಾರ ಪ್ರಾರಂಭಿಸಿದೆ. ಶಾಸಕರನ್ನು ಖರೀದಿಸುವ ವ್ಯವಹಾರ ಅವರ ಅಧಿಕಾರವಧಿಯಲ್ಲೇ ಆಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಯಾರ ಬೆಂಬಲಕ್ಕಾಗಿ ಅಭ್ಯರ್ಥಿ ಕಣಕ್ಕಳಿಸಿದೆ ಎಂಬುದು ಜಗಜ್ಜಾಹೀರಾಗಿದೆ ಎಂದರು.

ಮಾಜಿ ಸಚಿವ ಸಗೀರ್ ಅಹಮದ್ ಮಾತನಾಡಿ, ಧರ್ಮದ ಹೆಸರಿನಿಂದ ಜಯ ಗಳಿಸಿದ ಬಿಜೆಪಿ ಧರ್ಮ ದುರ್ಬಳಕೆ ಮಾಡಿಕೊಂಡು ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಮಾತನಾಡಿ, ಎಲ್ಲರೂ ನಾಯಕರಂತೆ ವರ್ತಿಸಬಾರದು. ಕಾರ್ಯಕರ್ತರಾಗಿ ಕೆಲಸ ಮಾಡಿ, ಚುನಾವಣೆ ಎದುರಿಸಿದಾಗ ಮಾತ್ರ ಜಯ ಸಾಧ್ಯ ಎಂದರು.

ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಲ್.ಮೂರ್ತಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಆನಂದ್ , ಮೋಹನ್, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಯುವ ಕಾಂಗ್ರೆಸ್ ಆಧ್ಯಕ್ಷ ನಿಖಿಲ್‌ಗೌಡ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.