ADVERTISEMENT

ಸಹಕಾರ ಕ್ಷೇತ್ರಕ್ಕೆ ಮಹಿಳೆ ಬರಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 11:00 IST
Last Updated 19 ಜೂನ್ 2011, 11:00 IST

ತರೀಕೆರೆ: ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮಾಡಲು ಸಹಕಾರ ಶಿಕ್ಷಣವನ್ನು ನೀಡಲು ಎನ್‌ಸಿಯುಐ ಮುಂದೆ ಬಂದಿದೆ ಎಂದು ಎನ್‌ಸಿಯುಐ ನ ಜಿಲ್ಲಾ ಯೋಜನಾಧಿಕಾರಿ ಎ.ಜಿ.ಅನಿತಾ ತಿಳಿಸಿದರು.

ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭದ್ರಾ ಮಹಿಳಾ ವಿವಿದ್ಧೋದ್ದೇಶ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಸಬಲೀಕರಣಕ್ಕೆ ಆರ್ಥಿಕ, ಸಾಮಾಜಿಕ ಮತ್ತು ಸಾಸ್ಕೃತಿಕ ಅಭಿವೃದ್ಧಿಗೆ ಸಂಸ್ಥೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯದಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳನ್ನು ಹುಟ್ಟು ಹಾಕಲಾಗಿದ್ದು, ಪ್ರತಿ ಸಂಘದಲ್ಲಿ ಕನಿಷ್ಠ 500ಕ್ಕೂ ಹೆಚ್ಚು ಸದಸ್ಯರು ಇರುತ್ತಾರೆ. ಇಲ್ಲಿನ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಎನ್‌ಸಿಯುಐ  ಮಾರುಕಟ್ಟೆ ಒದಗಿಸಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಎಸ್.ಸುರೇಶ್, ಗ್ರಾಮೀಣ ಪ್ರದೇಶದ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳು ಮತ್ತು ತಿಂಡಿ ತಿನಿಸುಗಳಿಗೆ ಮಾರುಕಟ್ಟೆ ಒದಗಿಸುವ ಎನ್‌ಸಿಯುಐ ನ ಚಿಂತನೆ ಸ್ವಾಗತಾರ್ಹವಾಗಿದ್ದು, ಸಂಘದ ಸ್ಥಾಪನೆಯ ಹಿಂದಿರುವ ಮೂಲ ಉದ್ದೇಶವನ್ನು ಮರೆಯದೆ ಮಹಿಳೆಯರು ಸ್ವಾವಲಂಬಿಗಳಾಗಲು ಕೆರೆ ನೀಡಿದರು.

ಭದ್ರಾ ವಿವಿದ್ದೋದೇಶ ಸಂಘದ ಅಧ್ಯಕ್ಷೆ ಜಯಮ್ಮ ಮರಿಸ್ವಾಮಿ ಮಾತನಾಡಿ, ಸಂಘಕ್ಕೆ 500 ಮಹಿಳೆಯರು ಸ್ವಯಂ ಪ್ರೇರಿತರಾಗಿ ಷೇರುದಾರರಾಗಿದ್ದು, ರೂ. 2 ಲಕ್ಷ ಸಂಗ್ರಹಿಸಲಾಗಿದೆ. ಗ್ರಾಮೀಣ ಮಹಿಳೆಯರ ಉನ್ನತ್ತಿಗೆ ಶ್ರಮಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ, ಸದಸ್ಯ ಎಲ್.ಎ.ಅನ್ಬು, ಕೃಷಿಕ ಸಮಾಜದ ಅಧ್ಯಕ್ಷ ಎ.ಆರ್.ರಾಜಶೇಖರ್, ಕಂಚಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ಶೃಂಗೇಶ್, ಲಕ್ಕವಳ್ಳಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಯೋಗಿ, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಮಚಂದ್ರ ರಾವ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್‌ರಹಮಾನ್, ಮಹಿಳಾ ನಿರ್ದೇಶಕರಾದ ರಾಜೇಶ್ವರಿ ನಂದಕುಮಾರ್, ಗೌರಮ್ಮ, ನಾಗರತ್ನ ಮತ್ತು 500ಕ್ಕೂ ಹೆಚ್ಚು ಮಹಿಳೆಯರು ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.