ADVERTISEMENT

ಸಿಗದ ಹಣ, ಪೂರ್ಣಗೊಳ್ಳದ ಮನೆ

ಬೈಗೂರು: ಬಸವ ವಸತಿ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:41 IST
Last Updated 22 ಜೂನ್ 2013, 12:41 IST

ಚಿಕ್ಕಮಗಳೂರು: ಆವತಿ ಹೋಬಳಿ ಬೈಗೂರು ಪಂಚಾಯಿತಿಯಲ್ಲಿ ಕಳೆದ 2ವರ್ಷಗಳಿಂದ ಬಸವ ವಸತಿಯೋಜನೆಯಡಿ ಮಂಜೂರಾದ ಮನೆಗಳಿಗೆ ತಳಪಾಯ ಹಾಕಿ ಕೊಂಡಿದ್ದರೂ ಹಣ ಮಾತ್ರ ಬಿಡುಗಡೆಯಾಗಿಲ್ಲ. ನಿವೇಶನ ಹಕ್ಕು ಪತ್ರ ಸಿಗದೆ ಬಹುತೇಕ ಜನರು ಗುಡಿಸಲಿನಲ್ಲೆ ವಾಸಮಾಡಬೇಕಾಗ ಸ್ಥಿತಿ ಎದುರಾಗಿದೆ.

ಕಳೆದ 2010-11ನೆಯ ಸಾಲಿನಲ್ಲಿ ಮಂಜೂರಾದ ಮನೆಗಳಿಗೆ ಫೌಂಡೇಷನ್ ಹಾಕಿ ಕೊಳ್ಳಲಾಗಿದೆ ಮತ್ತೆ ಕೆಲವು ಮನೆಗಳು ಗೋಡೆಯ ಹಂತದಲ್ಲಿವೆ ಹಣಬಿಡುಗಡೆಯಾಗದೆ ಮಳೆಗೆ ಗೋಡೆ ಕುಸಿಯುವ ಭೀತಿಯನ್ನು  ಎದುರಿಸಬೇಕಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ತಾಲ್ಲೂಕು ಪಂಚಾಯಿತಿಯಿಂದ ಜಿ.ಪಿ.ಎಸ್. ಸರ್ವೆ ನಡೆಸಿಲ್ಲ. ಹಾಗಾಗಿ ಕೆಲವು  ಮನೆಗಳು ವಜಾಗೊಂಡಿವೆ. ತಕ್ಷಣ ವಜಾಗೊಂಡಿರುವ ಮನೆಗಳನ್ನು ಮತ್ತೆ ಸರಿಪಡಿಸಿ ವಸತಿ ಸೌಲಭ್ಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಫಲಾನುಭವಿಗಳು ಕೋರಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ 8ಗ್ರಾಮಗಳ ಸುಮಾರು 35 ಫಲಾನುಭವಿಗಳು ಸಾಲ ಮಾಡಿ ಗೋಡೆ ಹಂತದವರೆಗೆ ಮನೆ ನಿರ್ಮಿಸಿ ಕೊಂಡಿದ್ದಾರೆ. ಇವರುಗಳಿಗೆ ತಕ್ಷಣ ಹಣ ಬಿಡುಗಡೆಗೊಳಿಸಿ ಮೇಲ್ಛಾವಣಿ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಣತಿ, ಗವಿಗದ್ದೆ ಗ್ರಾಮಗಳು ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಪರಿಶಿಷ್ಟಜಾತಿಯರು ನಿರ್ಮಿಸಿಕೊಂಡಿರುವ 15ಕ್ಕೂ ಹೆಚ್ಚು ಗುಡಿಸಲಿನ ಜಾಗಕ್ಕೆ ಹಕ್ಕು ಪತ್ರಸಿಗದೆ ಸರ್ಕಾರದ ವಸತಿ ಸೌಲಭ್ಯದಿಂದ ವಂಚಿತರಾಗಬೇಕಾಗಿದೆ. ನಿವೇಶನ ಹಕ್ಕುಪತ್ರ ನೀಡಿ ಮನೆ ನಿರ್ಮಿಸಿಕೊಳ್ಳಲು ಅವಕಾಶಮಾಡಿಕೊಡಬೇಕು ಎಂದು ಆ ಭಾಗದ ಜನಪ್ರತಿನಿಧಿಗಳು ಹೇಳುತ್ತಾರೆ.

ಈ ಭಾಗದಲ್ಲಿ ಸುಮಾರು 120 ಬಿ.ಪಿ.ಎಲ್. ಕಾರ್ಡ್‌ಗಳಿವೆ. ಕೆಲವು ಕಾರ್ಡುಗಳಿಗೆ ಅನಿಲ ಸಂಪರ್ಕ ಹೊಂದಿದ್ದಾರೆ ಎಂದು ತಪ್ಪಾಗಿ ನಮೂದಾಗಿರುವುದರಿಂದ ಸೀಮೆ ಎಣ್ಣೆಗೆ ಪರದಾಡುವ ಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪರಿಶಿಷ್ಟಜಾತಿಯವರು ವಾಸಿಸುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಹಾಗೂ ಸೀಮೆಎಣ್ಣೆಯಿಂದ ವಂಚಿತರಾಗಿರುವ ಬಡಕುಟುಂಬಗಳಿಗೆ ಸೀಮೆ ಎಣ್ಣೆ ಕೊಡಿಸಲು ಮುಂದಾಗಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ.ಮಂಜಪ್ಪ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.