ಮೂಡಿಗೆರೆ: ಮಹಾತ್ಮ ಗಾಂಧೀಜಿಯವರ ಮೂಲ ಕಲ್ಪನೆಗಳಲ್ಲಿ ಒಂದಾದ ಹಳ್ಳಿಗಳ ಉದ್ದಾರದ ಕನಸು ನನಸಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿಎಚ್. ಶಂಕರಮೂರ್ತಿ ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಗುರುವಾರ ನಡೆದ, ಮಾಹಿತಿ ಕೇಂದ್ರ, ಮತ್ತು ಎಸ್‌ಜಿಎಸ್‌ವೈ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ನಿವಾರಣೆಯಾಗುತ್ತಿದ್ದು, ನಗರ ಜೀವನ ಜಂಜಾಟದಿಂದ ಜನತೆ ಹಳ್ಳಿ ಜೀವನದೆಡೆಗೆ ಒಲವು ತೋರುತ್ತಿದ್ದಾರೆ ಎಂದರು.
ಸಾಮರ್ಥ್ಯಸೌಧವನ್ನು ಉದ್ಘಾಟಿಸಿ ಶಾಸಕ ಎಂಪಿ. ಕುಮಾರಸ್ವಾಮಿ ಮಾತನಾಡಿ, ಪರಿಶಿಷ್ಟಜಾತಿ ಮತ್ತು ಪಂಗಡಗಳ ಕಾರ್ಪೊರೇಶನ್ ಸಾಲವನ್ನು ಮನ್ನಾ ಮಾಡಲಾಗಿದೆ. ತಾಲ್ಲೂಕಿನಲ್ಲಿ ಫಾರಂ 53 ನ್ನು ಸಮರ್ಪಕವಾಗಿ ವಿತರಣೆ ಮಾಡಲಾಗಿದೆ. ಇದೆಲ್ಲದರ ಪ್ರಯೋಜನ ಫಲಾನುಭವಿಗಳಿಗೆ ತಲುಪಬೇಕು ಎಂದರು.
ತಾಲ್ಲೂಕು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿದ ಶಾಸಕರು ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡುವಂತಿದ್ದರೆ ಮಾತ್ರ ಕೆಲಸ ಮಾಡಿ ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಈಗ ನಿರ್ಮಾಣವಾಗಿರುವ ಅಂಗಡಿ ಮಳಿಗೆಗಳಲ್ಲಿ ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 12 ಕುಟುಂಬಗಳು ಈ ಅಂಗಡಿ ಮಳಿಗೆಗಳ ಮೂಲಕ ಜೀವನ ಸಾಗಿಸಬಹುದಾಗಿದೆ. ತಾಲ್ಲೂಕಿನಾದ್ಯಂತ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷೆ ಸುಮತಿ ಸುರೇಶ್ ಜಿಪಂ ಸದಸ್ಯರಾದ ವಿಕೆ. ಶಿವೇಗೌಡ, ಅರೇಕುಡಿಗೆ ಶಿವಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಿಎನ್ ಜಯಂತ್, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಹಳಸೆಶಿವಣ್ಣ, ಹಳೇಮೂಡಿಗೆರೆ ಸಹಕಾರ ಸಂಘದ ಅಧ್ಯಕ್ಷ ದುಂಡುಗ ಪ್ರಮೋದ್ ಮಾತನಾಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ ಲಕ್ಷ್ಮಿಕಾಂತ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ. ಮಂಜುನಾಥ್, ಸ್ಥಾಯಿಸಮಿತಿ ಅಧ್ಯಕ್ಷ ಶೇಷಗಿರಿ, ಜಿಪಂ ಸದಸ್ಯೆ ಕವಿತಾಚಂದ್ರು, ತಾಪಂ ಸದಸ್ಯರಾದ ಸಬ್ಲಿದೇವರಾಜು, ಹೂವಮ್ಮ, ನೇಪಾಆದಿತ್ಯ, ಎ.ಜೆ. ಸುಬ್ರಾಯ, ಹಿತ್ಲುಮಕ್ಕಿ ರಾಜೆಂದ್ರ, ಅನ್ನಪೂರ್ಣ, ಸುಧಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.