ADVERTISEMENT

ಹಸು, ಎತ್ತು ಮರಣ ಹೊಂದಿದರೆ ₹10 ಸಾವಿರ ಪರಿಹಾರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 6:34 IST
Last Updated 11 ಅಕ್ಟೋಬರ್ 2017, 6:34 IST
ನರಸಿಂಹರಾಜಪುರ ತಾಲ್ಲೂಕು ಬಿ.ಎಚ್.ಕೈಮರದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಡಿ.ಎನ್.ಅಶ್ವನ್ ಚಾಲನೆ ನೀಡಿದರು.
ನರಸಿಂಹರಾಜಪುರ ತಾಲ್ಲೂಕು ಬಿ.ಎಚ್.ಕೈಮರದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷ ಡಿ.ಎನ್.ಅಶ್ವನ್ ಚಾಲನೆ ನೀಡಿದರು.   

ಬಿ.ಎಚ್.ಕೈಮರ(ಎನ್.ಆರ್.ಪುರ): ರೈತರು ಸಾಕಣೆ ಮಾಡಿದ ಹಸು, ಎತ್ತು ಮರಣ ಹೊಂದಿದರೆ ಪಶುಪಾಲನಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ₹10ಸಾವಿರ ಪರಿಹಾರ ನೀಡುವ ಯೋಜನೆ ಜಾರಿಗೆ ಬಂದಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ್ ತಿಳಿಸಿದರು.

ತಾಲ್ಲೂಕಿನ ಬಿ.ಎಚ್.ಕೈಮರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ‘ರೈತರು ಸಾಕಿದ ಆಡು, ಕುರಿ ಮರಣ ಹೊಂದಿದರೆ ₹5ಸಾವಿರ ಪರಿಹಾರ ನೀಡಲಾಗುವುದು. ಸಾಕಿದ ಪ್ರಾಣಿಗಳು ಖಾಯಿಲೆ, ಅಪಘಾತ ಅಥವಾ ಕಾಡು ಪ್ರಾಣಿಗಳ ದಾಳಿಯಿಂದ ಮರಣ ಹೊಂದಿದರೂ ಸಹ ಪರಿಹಾರ ನೀಡಲಾಗುತ್ತದೆ’ ಎಂದರು.

ಸಾಕು ಪ್ರಾಣಿಗಳು ಮರಣ ಹೊಂದಿದ ಕೂಡಲೇ ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮರಣೋತ್ತರ ಪರೀಕ್ಷೆ ನಡೆಸಬೇಕಾಗಿರುವುದರಿಂದ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು. ಇಲಾಖೆಯಿಂದ ರೈತರಿಗೆ ಮೇವಿನ ಬೆಳೆ ಬೆಳೆಯಲು 6 ಕೆಜಿ ಮೇವಿನ ಜೋಳದ ಕಿಟ್‌ ಅನ್ನು ಉಚಿತವಾಗಿ ನೀಡಲಾಗುವುದು.

ADVERTISEMENT

ಇದಕ್ಕಾಗಿ ಪಹಣಿ, ಜೆರಾಕ್ಸ್ ನೀಡಬೇಕಾಗಿದ್ದು, ವರ್ಷದಲ್ಲಿ 2 ಬಾರಿ ಕಾಲು ಬಾರಿ ಕಾಲುಬಾಯಿ ಜ್ವರ ಬರದಂತೆ ಮುಂಜಾಗೃತವಾಗಿ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಶ್ವನ್ ಮಾತನಾಡಿ, ‘ಸಂಘದಲ್ಲಿ ಪ್ರಸ್ತುತ 365 ಸದಸ್ಯರಿದ್ದು, ಪ್ರತಿ ದಿವಸ 385 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ.

ಸಂಘದ ಸದಸ್ಯರ ಷೇರು ಹಣವನ್ನು ₹500ಕ್ಕೆ ಹೆಚ್ಚಿಸಿದ್ದು, ಎಲ್ಲ ಸದಸ್ಯರು ಕಡ್ಡಾಯವಾಗಿ ₹500 ಷೇರು ಹಾಕಬೇಕಾಗಿದೆ. ಸಂಘದಿಂದ ಈಗಾಗಲೇ ಸ್ವಂತ ಕಟ್ಟಡ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಸಂಘಕ್ಕೆ ಕಂಪ್ಯೂಟರ್ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.

ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ 10 ಹಾಲು ಉತ್ಪಾದಕರ ಸಂಘವು ಹಾಲು ಒಕ್ಕೂಟದ ವ್ಯಾಪ್ತಿಗೆ ಬರುತ್ತಿದೆ. ಇದನ್ನು ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಸೇರಿಸಬೇಕು ಎಂದು ಈಗಾಗಲೇ ಹಲವು ಹೋರಾಟಗಳನ್ನು ಮಾಡಿದರೂ ಸಹ ಪ್ರಯೋಜವಾಗಿಲ್ಲ. ಇದಕ್ಕಾಗಿ ಹೋರಾಟ ಸಮಿತಿ ರಚಿಸಲಾಗಿದ್ದು, ಸಮಿತಿಯಿಂದ ಶೀಘ್ರದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಶೈಜು ವಾರ್ಷಿಕ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷೆ ಸುಜಾತ, ನಿರ್ದೇಶಕರಾದ ಎಂ.ಡಿ.ಪೌಳಿ, ಎಸ್‌.ಯು.ಪ್ರಸನ್ನ, ಇ.ಎನ್.ಪ್ರಶಾಂತ, ಕೆ.ಎಸ್.ನಾಗೇಶ್, ಎನ್.ಎಸ್.ಅರವಿಂದ, ಎಂ.ಸಿ.ವಿಜಯ, ಕೆ.ಸಿ.ಸದಾಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.