ADVERTISEMENT

ಹೆಬ್ಬೊಳೆ, ಕೋಟೆಹೊಳೆ ಸೇತುವೆಗೆ ಬೇಕಿದೆ ಕಾಯಕಲ್ಪ

ರವಿ ಕೆಳಂಗಡಿ
Published 17 ಜೂನ್ 2018, 12:44 IST
Last Updated 17 ಜೂನ್ 2018, 12:44 IST
ಕಳಸದ ಕೋಟೆಹೊಳೆ ಸೇತುವೆಗೆ ಮರದ ದಿಮ್ಮಿಗಳು ಗುದ್ದಿ ತಡೆಗೋಡೆ ಸಂಪೂರ್ಣವಾಗಿ ಕುಸಿದಿರುವ ದೃಶ್ಯ
ಕಳಸದ ಕೋಟೆಹೊಳೆ ಸೇತುವೆಗೆ ಮರದ ದಿಮ್ಮಿಗಳು ಗುದ್ದಿ ತಡೆಗೋಡೆ ಸಂಪೂರ್ಣವಾಗಿ ಕುಸಿದಿರುವ ದೃಶ್ಯ   

ವಾರದಿಂದಲೂ ಸುದ್ದಿಯಲ್ಲಿರುವ ಹೆಬ್ಬೊಳೆ ಮತ್ತು ಕೋಟೆಹೊಳೆ ಸೇತುವೆಗಳಿಗೆ ಮಳೆಯಿಂದಾಗಿ ಹಾನಿ ಸಂಭವಿಸಿದ್ದು, ಆ ಸೇತುವೆಗಳನ್ನು ಬಳಸುವ ನಾಗರಿಕರಲ್ಲಿ ಆತಂಕ ಮನೆಮಾಡಿದೆ.

ಜೂನ್ 9ರಿಂದ ಭದ್ರಾ ನದಿ ಪ್ರವಾಹದಿಂದಾಗಿ ಹೆಬ್ಬೊಳೆ ಸೇತುವೆ ಮೂರು ಬಾರಿ ಮುಳುಗಿತ್ತು. ಗುರುವಾರವಂತೂ ಹೆಬ್ಬೊಳೆ ಸೇತುವೆ ಜತೆಗೆ ಅತ್ಯಂತ ಎತ್ತರದ ಕೋಟೆಹೊಳೆ ಸೇತುವೆ ಕೂಡ 6 ಗಂಟೆಗಳ ಕಾಲ ಸಂಪೂರ್ಣವಾಗಿ ಮುಳುಗಿತ್ತು. ಆ ದಿನದ ಪ್ರವಾಹದಲ್ಲಿ ದೊಡ್ಡ ಗಾತ್ರದ ಮರದ ದಿಮ್ಮಿಗಳು ನದಿಯಲ್ಲಿ ತೇಲಿ ಬಂದಿದ್ದವು. ವೇಗವಾಗಿ ಹರಿಯುತ್ತಿದ್ದ ನೀರಿನ ಜೊತೆ ತೇಲಿ ಬಂದ ದಿಮ್ಮಿಗಳ ಆಘಾತದಿಂದ ಈ ಎರಡೂ ಸೇತುವೆಗಳಿಗೆ ದೊಡ್ಡ ಮಟ್ಟದಲ್ಲಿ ಹಾನಿ ಆಗಿದೆ.

ಸೇತುವೆಯ ಒಂದು ಬದಿಗೆ ಸತತವಾಗಿ ಮರಗಳ ದಿಮ್ಮಿಗಳು ಅಪ್ಪಳಿಸಿದ್ದರಿಂದ ಹೆಬ್ಬೊಳೆ ಸೇತುವೆಯ ಕಾಂಕ್ರೀಟ್ ಸ್ಲಾಬ್‍ನಲ್ಲಿ ಬಿರುಕುಗಳು ಮೂಡಿವೆ. ಕೆಲವಡೆ ವಿಪರೀತವಾಗಿ ಕಾಂಕ್ರೀಟ್ ಒಡೆದಿದ್ದು, ಸೇತುವೆಯ ಮಟ್ಟದಿಂದ ಸ್ಲಾಬ್ ಕೆಳಕ್ಕೂ ಜಗ್ಗಿವೆ. ಇದರಿಂದ ಈ ಸೇತುವೆ ಬಳಸುವವರು ಆತಂಕಕ್ಕೆ ಒಳಗಾಗಿದ್ದಾರೆ. ಸೇತುವೆಯ ಅರ್ಧ ಅಗಲವನ್ನು ಇದೇ ಹಾನಿಗೀಡಾದ ಸ್ಲಾಬ್ ಆವರಿಸಿದ್ದು, ಇನ್ನರ್ಧ ಭಾಗದಲ್ಲಿ ಮಾತ್ರ ವಾಹನ ಸಾಗಬಹುದು ಎಂಬ ಸ್ಥಿತಿ ಇದೆ ಎಂದು ಸ್ಥಳೀಯರಾದ ಮಹಾವೀರ್ ಪ್ರಭು ಹೇಳುತ್ತಾರೆ.

ADVERTISEMENT

ಹೆಬ್ಬೊಳೆಗೆ ಶಾಶ್ವತ ಸೇತುವೆ ನಿರ್ಮಾಣದ ಕೂಗು ಎದ್ದಿರುವ ಬೆನ್ನಲ್ಲೇ ಈ ಮುಳುಗು ಸೇತುವೆಗೆ ಹಾನಿ ಸಂಭವಿಸಿದೆ. ಈ ಸೇತುವೆ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪಕ್ಕೆ ಇನ್ನಷ್ಟು ಬೆಂಬಲವೂ ಸಿಕ್ಕಂತಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೆನ್ನಯ್ಯ ಅವರನ್ನು ಪ್ರಶ್ನಿಸಿದಾಗ ಅವರು 'ಹೆಬ್ಬೊಳೆ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಕಾಂಕ್ರೀಟ್ ಸ್ಲಾಬ್ ಮೇಲ್ಪದರಕ್ಕೆ ಆಗಿರುವ ಹಾನಿ ಸರಿಪಡಿಸಲು ತುರ್ತು ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಮಾಹಿತಿ ನೀಡಿದರು.

ಇನ್ನು ಕೋಟೆಹೊಳೆಯು ದಾಖಲೆಯ ಎತ್ತರಕ್ಕೆ ಏರಿದ್ದರಿಂದ ನೀರಿನಲ್ಲಿ ತೇಲಿ ಬಂದ ಬೃಹತ್ ಗಾತ್ರದ ಮರಗಳ ದಿಮ್ಮಿಗಳು ಆ ಸೇತುವೆಗೂ ಹಾನಿ ಮಾಡಿವೆ. ಸೇತುವೆಯ ಎಡಭಾಗದ ತಡೆಗೋಡೆಗಳೆಲ್ಲವೂ ಬಹುತೇಕ ಜಖಂಗೊಂಡಿವೆ. 25 ಅಡಿ ಉದ್ದದ ಎರಡು ತಡೆಗೋಡೆಗಳಂತೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದರಿಂದ ಆ ಸೇತುವೆಯಲ್ಲಿ ನಡೆದು ಸಾಗುವ ಗ್ರಾಮಸ್ಥರಿಗೆ ಅಪಾಯ ಕಾದಿದೆ.

'ಈ ಸೇತುವೆ ದಾಟಿ ಪ್ರತಿದಿನವೂ ಕಾರ್ಮಿಕರು ತೋಟ ಕೆಲಸಕ್ಕೆ ತೆರಳುತ್ತಾರೆ. ಗ್ರಾಮಸ್ಥರು ಕಳಸ ಪಟ್ಟಣದಿಂದ ದಿನಸಿ ಖರೀದಿಸಿ ಇದೇ ಸೇತುವೆಯನ್ನು ಬಳಸುತ್ತಾರೆ. ಶಾಲಾ ಮಕ್ಕಳಿಗೂ ಇದೇ ಸೇತುವೆ ಕಳಸ ಸಂಪರ್ಕಕ್ಕೆ ಇರುವ ಏಕೈಕ ಸಂಪರ್ಕ ಕೊಂಡಿ. ಆದ್ದರಿಂದ ಈ ಸೇತುವೆಯ ದುರಸ್ತಿಗೆ ತುರ್ತು ಕ್ರಮ ತೆಗೆದುಕೊಳ್ಳಲೇಬೇಕು' ಎಂದು ಹೊಸೂರಿನ ಭಾಸ್ಕರ ಗೌಡ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.