ADVERTISEMENT

‘ಅಡಿಕೆ ನಿಷೇಧ ಯತ್ನದ ಹಿಂದೆ ಐಟಿಸಿ ಲಾಬಿ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:40 IST
Last Updated 6 ಜನವರಿ 2014, 6:40 IST

ಕೊಪ್ಪ: ಅಡಿಕೆ ನಿಷೇಧಕ್ಕೆ ನಡೆಯುತ್ತಿ­ರುವ ನಿರಂತರ ಪ್ರಯತ್ನಗಳ ಹಿಂದೆ ತಂಬಾಕು ಕಂಪೆನಿ (ಐಟಿಸಿ) ಗಳ ಪ್ರಬಲ ಲಾಬಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ ಆರೋಪಿಸಿದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇ­ಶಕರ ಕಚೇರಿ ಮತ್ತು ಕೃಷಿಕ ಸಮಾಜದ ವತಿಯಿಂದ ಇತ್ತೀಚೆಗೆ ಬಾಳಗಡಿಯ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಕೃಷಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಾರ್ಷಿಕ 140 ಬಿಲಿಯನ್ ಲಾಭ ಗಳಿಸಿರುವ ಐಟಿಸಿ ಕಂಪೆನಿ ಆರೋಗ್ಯಕ್ಕೆ ಹಾನಿಕಾರಕವಾದ ಹೊಗೆಸೊಪ್ಪು ಬೆಳೆ ವಿಸ್ತರಣೆಗೆ ಅನುಮತಿ ಪಡೆಯಲು ಪ್ರಬಲ ಲಾಬಿ ನಡೆಸುತ್ತಿದೆ. ಇದರ ಇನ್ನೊಂದು ಭಾಗವಾಗಿ ಉದ್ಯಮದಲ್ಲಿ ತನಗೆ ಪೈಪೋಟಿ ನೀಡುತ್ತಿರುವ ಅಡಿಕೆ ಬೆಳೆ ನಿಷೇಧಕ್ಕೆ ಅಧಿಕಾರಿಗಳ, ಎನ್‌ಜಿ­ಒಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ನಮ್ಮ ಜನಪ್ರತಿನಿಧಿಗಳು ಅಧಿಕಾರಿಗಳ ಮಾತಿಗೆ ತಲೆದೂಗುವು­ದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದ ಅವ­ರು, ಅಡಿಕೆಯ ರಕ್ಷಣೆಗಾಗಿ ಬೆಳೆಗಾ­ರರು ಪಕ್ಷಭೇದ ಮರೆತು ಹೋರಾಟ ರೂಪಿಸಬೇಕಾಗಿದೆ ಎಂದರು.

ಪ್ರಗತಿಪರ ಕೃಷಿಕ ಅಗಲಿ ನಾಗೇಶ್‌­ರಾವ್ ಮಾತನಾಡಿ, ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ್ದು ದೇಶದ ಕೃಷಿರಂಗ ಅವನತಿಯತ್ತ ಸಾಗಲು ಕಾರಣ­ವಾಗಿದೆ. ವಿದೇಶಿ ಕಂಪೆನಿಗಳ ಧಾಂಗುಡಿಯಿಂದ ದೇಶೀಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುಸಿದಿದೆ. ಪಾರಂಪರಿಕ ಕೃಷಿ ಪದ್ಧತಿಯಲ್ಲಿ ನೆಮ್ಮದಿ ಕಂಡಿದ್ದ ರೈತರನ್ನು ದಿಕ್ಕುತಪ್ಪಿಸಿ ವಿದೇಶಿ ತಳಿ, ವಿಷಕಾರಿ ಗೊಬ್ಬರಗಳ ಬಳಕೆಗೆ ಪ್ರಚೋದಿಸಿ ಬೆಳೆ ನಷ್ಟದ ಜೊತೆ ನೆಲದ ಸಾರವನ್ನೂ ಕಳೆದುಕೊಳ್ಳುವ ಅತಂತ್ರ ಸ್ಥಿತಿಗೆ ದೂಡಿರುವ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕಳಪೆ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು ಮುಂದಾ­ಗಿದ್ದು, ಈ ಹಿನ್ನೆಲೆಯಲ್ಲೇ ಅಡಿಕೆ ನಿಷೇಧದ ಹುನ್ನಾರ ನಡೆದಿದೆ­ಯೆಂದರು.

ತಾಲ್ಲೂಕು ರೈತಸಂಘದ ಕಾರ್ಯಾ­ಧ್ಯಕ್ಷ ಕರುವಾನೆ ನವೀನ್‌ ಮಾತನಾಡಿ, ವಿವಿಧ ಯೋಜನೆ ಹೆಸರಲ್ಲಿ  ಮಲೆ­ನಾಡಿನ ರೈತರ ಬದುಕು ಅತಂತ್ರ ಮಾಡಲು ಯತ್ನಗಳು ನಡೆದಿದ್ದು, ಇದರ ವಿರುದ್ಧ ಸಂಘಟಿತ ಹೋರಾ­ಟಕ್ಕೆ ರೈತರೆಲ್ಲ ಪಕ್ಷಭೇದ ಮರೆತು ಒಗ್ಗೂಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಹರೀಶ್ ಮಾತನಾಡಿ, ಸಬ್ಸಿಡಿ ಹೆಸರಲ್ಲಿ ರೈತರ ಸುಲಿಗೆ ನಡೆಯುತ್ತಿದೆ. ಅಡಿಕೆ ನಿಷೇಧ ವಿಚಾರದಲ್ಲಿ ರೈತರು ಆತಂಕಗೊಂಡಿದ್ದು, ಜನ ಪ್ರತಿನಿಧಿಗಳು ದಿಕ್ಕು ತಪ್ಪಿಸುವ ಹೇಳಿಕೆ ನೀಡದೆ, ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಿದರು.

ಶಿವಮೊಗ್ಗದ ನವುಲೆ ಕೃಷಿ ಕಾಲೇಜಿನ ಪ್ರಾಧ್ಯಾಪಕ ಡಾ. ದುಷ್ಯಂತ್‌ಕುಮಾರ್ ವಿವಿಧ ಬತ್ತದ ತಳಿಗಳನ್ನು ಪರಿಚಯಿಸಿ ಇಳುವರಿ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕಿನಲ್ಲಿ ಹೆಕ್ಟೇರಿಗೆ ಅಧಿಕ ಭತ್ತ ಬೆಳೆದ ಪ್ರಗತಿಪರ ಕೃಷಿಕರಾದ ನಾರ್ವೆಯ ಕೆ.ಎಸ್. ಕಾಡಪ್ಪಗೌಡ (58.94 ಕ್ವಿಂಟಾಲ್), ಸೋಮ್ಲಾಪುರದ ಜಯಲಕ್ಷ್ಮಿ (54.17), ಬೆತ್ತದ­ಕೊಳಲಿನ ಸೂರ್ಯನಾರಾಯಣ್‌ (49.57) ಅವರಿಗೆ ಕೃಷಿ ಇಲಾಖೆ­ಯಿಂದ ’ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಡಿಕೆ ಹಳದಿ ಎಲೆ ರೋಗ ನಿಯಂತ್ರಣದಲ್ಲಿ  ಸಾಧನೆಗೈದ ಗುಡ್ಡೆತೋಟದ ಪ್ರಭಾ­ಕರ್, ತರಕಾರಿ ಬೆಳೆಯಲ್ಲಿ ಸಾಧನೆ­ಗೈದ ಮಣಿಪುರದ ನಿಶಾಂತಿ ಡಿ’ಸಿಲ್ವಾ­ರನ್ನು ಕೃಷಿಕ ಸಮಾಜದಿಂದ ಸನ್ಮಾನಿಸ­ಲಾಯಿತು.

ತಾ.ಪಂ. ಅಧ್ಯಕ್ಷೆ ಪದ್ಮಾ­ವತಿ ರಮೇಶ್, ಉಪಾಧ್ಯಕ್ಷ ಪೂರ್ಣ-­ಚಂದ್ರ, ಸದಸ್ಯರಾದ ರುಕ್ಮಿಣಿ ಶ್ರೀನಿ­ವಾಸ್, ಸುಭದ್ರಮ್ಮ,  ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುರುಷೋ­ತ್ತಮ್, ಹಸಿರು ಸೇನೆ ಅಧ್ಯಕ್ಷ ಚಿಂತನ್ ಬೆಳಗೊಳ, ಪ್ರಗತಿಪರ ಕೃಷಿಕರಾದ ಕೃಷ್ಣಮೂರ್ತಿ, ಕೃಷ್ಣಪ್ಪಗೌಡ,  ಮೊದ­ಲಾದವರಿದ್ದರು. ಕೃಷಿ ಪರಿಕರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.