ADVERTISEMENT

‘ಅತಿವೃಷ್ಟಿ ಪರಿಹಾರಕ್ಕೆ ಭರವಸೆ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 8:12 IST
Last Updated 12 ಸೆಪ್ಟೆಂಬರ್ 2013, 8:12 IST
ಕೊಪ್ಪದ ಶಾಸಕರ ಕಚೇರಿಯಲ್ಲಿ ಮಂಗಳವಾರ ಶಾಸಕ ಡಿ.ಎನ್.ಜೀವರಾಜ್ ಅವರು ಕೃಷಿ ಇಲಾಖೆ ಸಾಲಬಾಧೆಯಿಂದ ಮೃತಪಟ್ಟ ರೈತರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರದ ಚೆಕ್ ವಿತರಿಸಿದರು. ಸಹಾಯಕ ಕೃಷಿ ನಿರ್ದೇಶಕ ಸತ್ಯನಾರಾಯಣರಾವ್, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ.ನರೇಂದ್ರ ಜೊತೆಗಿದ್ದರು.
ಕೊಪ್ಪದ ಶಾಸಕರ ಕಚೇರಿಯಲ್ಲಿ ಮಂಗಳವಾರ ಶಾಸಕ ಡಿ.ಎನ್.ಜೀವರಾಜ್ ಅವರು ಕೃಷಿ ಇಲಾಖೆ ಸಾಲಬಾಧೆಯಿಂದ ಮೃತಪಟ್ಟ ರೈತರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರದ ಚೆಕ್ ವಿತರಿಸಿದರು. ಸಹಾಯಕ ಕೃಷಿ ನಿರ್ದೇಶಕ ಸತ್ಯನಾರಾಯಣರಾವ್, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ.ನರೇಂದ್ರ ಜೊತೆಗಿದ್ದರು.   

ಕೊಪ್ಪ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಪ್ರತಿ ಎಕರೆಗೆ ₨ 50 ಸಾವಿರ ಪರಿಹಾರ ಹಾಗೂ ₨ 50 ಸಾವಿರ ಬಡ್ಡಿ ರಹಿತ ಬೆಳೆ ಸಾಲ ವಿತರಿಸುವಂತೆ ಮುಖ್ಯಮಂತ್ರಿ­ಗಳನ್ನು ಒತ್ತಾಯಿ­ಸಿ­­ರುವುದಾಗಿ ಶಾಸಕ ಡಿ.ಎನ್.­ಜೀವರಾಜ್ ತಿಳಿಸಿದರು.

ಬುಧವಾರ ಬಾಳಗಡಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಕೃಷಿ ಇಲಾಖೆ ನೀಡುತ್ತಿರುವ ಸಾಲ­ಬಾಧೆಯಿಂದ ಆತ್ಮ­ಹತ್ಯೆ ಮಾಡಿಕೊಂಡ ರೈತರ ಕುಟುಂ­ಬಕ್ಕೆ ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು.

ಇದೇ 6ರಂದು ಮಾಜಿ ಮುಖ್ಯ­ಮಂತ್ರಿ ಸದಾನಂದ ಗೌಡ ನೇತೃ­ತ್ವದ ನಿಯೋಗ ಮುಖ್ಯ­ಮಂತ್ರಿಗಳನ್ನು ಅವರ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಅತಿವೃಷ್ಟಿ ಪರಿಹಾರಕ್ಕೆ ಒತ್ತಾಯಿಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ನಿಯೋಗದಲ್ಲಿ ಶಾಸಕರಾದ ವಿಶ್ವೇ­ಶ್ವರ ಹೆಗಡೆ ಕಾಗೇರಿ, ಆರಗ ಜ್ಞಾನೇಂದ್ರ, ಶ್ರಿನಿವಾಸ ಪೂಜಾರಿ, ನಾಗ­ರಾಜ ಶೆಟ್ಟಿ, ಅಂಗಾರ, ಮ್ಯೋಮ್ಕೊಸ್ ಹಾಗೂ ಕ್ಯಾಮ್ಕ ಅಧ್ಯ­ಕ್ಷರು ಇದ್ದರು.

ಪ್ರಕೃತಿ ವಿಕೋಪ ನಿಧಿಯಿಂದ ಈಗ ನೀಡುತ್ತಿರುವ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂ­ತಾಗಿದೆ.

ನಿಯೋಗ ಭೇಟಿಯಾಗುವ ಹಿಂದಿನ ದಿನವಷ್ಟೇ ಆಗುಂಬೆಯಲ್ಲಿ ಕೊಳೆರೋಗ ಪೀಡಿತ ತೋಟಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿಗಳಿಗೆ ಪರಿಸ್ಥಿ­ತಿಯ ಗಂಭೀರತೆ ಅರ್ಥವಾಗಿದೆ ಎಂದು ಭಾವಿಸಿದ್ದೇವೆ. ಅಡಿಕೆ ಹಳದಿ ಎಲೆ ರೋಗ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ನೆರವು ಕೋರಲು ಶಾಸಕರ ನಿಯೋಗ­ವನ್ನು ಪ್ರಧಾನಿ ಬಳಿಗೆ ಕರೆದೊಯ್ಯಲು ವಿನಂತಿಸಲಾಗಿದೆ. ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಲು ಮನವಿ ಮಾಡಿದ್ದೇವೆ ಎಂದರು.

ಮುತ್ತಿನಕೊಪ್ಪದಿಂದ ಕೊಪ್ಪಕ್ಕೆ 33 ಕೆ.ವಿ. ವಿದ್ಯುತ್ ಮಾರ್ಗ ಶೀಘ್ರ ಪೂರ್ಣಗೊಳ್ಳಲಿದೆ ಎಂದ ಅವರು, ಜಿಲ್ಲೆಗೆ ಮಂಜೂರಾದ ವೈದ್ಯಕೀಯ ಕಾಲೇಜು, ಮೊರಾರ್ಜಿ ವಸತಿ ಶಾಲೆ, ಹಾಲಿನ ಒಕ್ಕೂಟ, ಹರಿಹರಪುರ ಮಠಕ್ಕೆ ನೀಡಿದ್ದ ಅನುದಾನವನ್ನು ಈಗಿನ ಸರ್ಕಾರ ಹಿಂಪಡೆದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ತಮ್ಮ ಕ್ಷೇತ್ರದ 16 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆರ್ಥಿಕ ಮಂಜೂರಾತಿ ನೀಡಲು ವಿಳಂಬ ಮಾಡುತ್ತಿರುವ ಹಿಂದಿರುವ ಉದ್ದೇಶ ಏನು ಎಂದು ಪ್ರಶ್ನಿಸಿದರು. ಬಿಜೆಪಿ ಮುಖಂಡರಾದ ಎಸ್.ಎನ್.­ರಾಮ­ಸ್ವಾಮಿ, ಬಿ.ಎನ್.ಭಾಸ್ಕರ್, ಬಿ.ಸಿ.­ನರೇಂದ್ರ, ಎಚ್.ಡಿ.ಜಯಂತ್, ಹೊಸೂರು ದಿನೇಶ್, ಬಿ.ಆರ್.­ನಾರಾ­ಯಣ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.