ಚಿಕ್ಕಮಗಳೂರು: ವಂಶವಾಹಿನಿಯಾಗಿ ಬರುವ ಅನೇಕ ರೋಗಗಳನ್ನು ಯೋಗದಿಂದ ನಿಯಂತ್ರಿಸಬಹುದು ಎಂದು ಬಾಗಲಕೋಟೆ ಕೃಷ್ಣಾಶ್ರಮದ ಯೋಗಗುರು ಬಸವರಾಜ ಹಡಗಲಿ ತಿಳಿಸಿದರು.
ನಗರದ ಯುರೇಕಾ ಅಕಾಡೆಮಿಯಲ್ಲಿ ಉದ್ಭವ ಪ್ರಕಾಶನ ಮತ್ತು ಯುರೇಕಾ ಅಕಾಡೆಮಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯೋಗ ಮತ್ತು ಆರೋಗ್ಯ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲವರು ಆಸನಗಳನ್ನೆ ಯೋಗ ಎಂದು ತಪ್ಪಾಗಿ ಭಾವಿಸಿದ್ದಾರೆ. ಆಸನ, ಪ್ರಾಣಾಯಾಮ, ಧ್ಯಾನ ಇವುಗಳ ಯೋಗಾಸನದ ಅಂಗಗಳು. ಯೋಗ ಎಂಬುದು ಆಂತರಿಕ ಅನುಭೂತಿ, ಸ್ವಅನುಭವದಿಂದ ಪಡೆಯುವ ಸಿದ್ಧಿ ಎಂದು ಹೇಳಿದರು.
ಇಂದಿನ ಯಾಂತ್ರಿಕ ಬದುಕು ಮನುಷ್ಯನನ್ನು ಆವರಿಸಿದೆ. ಹಣ ಗಳಿಸುವ ಕಾತರ ಹೆಚ್ಚಿದೆ. ಲೌಕಿಕ ಸಂಪತ್ತನ್ನೆ ಸುಖ ಎಂದು ಜನರು ಭ್ರಮಿಸಿದ್ದಾರೆ ಎಂದರು.
ಸಾವಧಾನವಾಗಿ ಬದುಕನ್ನು ಸಿಂಹಾವಲೋಕನ ಮಾಡಿದಾಗ ಮಾತ್ರ ನಾವು ಎಷ್ಟು ಸಮಯ ವ್ಯರ್ಥವಾಗಿ ಕಳೆದಿದ್ದೇವೆ ಎಂಬುದು ಅರಿವಾಗುತ್ತದೆ. ಆಸನಗಳು ದೇಹದ ತೂಕ ಕಡಿಮೆ ಮಾಡುವುದರೊಂದಿಗೆ ಆರೋಗ್ಯಮಯ ಸಂದೇಶ ಉಂಟು ಮಾಡುತ್ತವೆ ಎಂದರು.
ಆಂತರಿಕ ಜ್ಞಾನಸಿದ್ಧಿಯೇ ಯೋಗ. ಮನಸ್ಸನ್ನು ನಿಯಂತ್ರಿಸುವ ಅಂತರಂಗದ ಘನತ ಅರಿಯುವ ಸಿದ್ಧಿಗೆ ನಿರಂತರ ಸಾಧನೆ ಮುಖ್ಯ ಎಂದರು.
ಉದ್ಭವ ಪ್ರಕಾಶನದ ಅಧ್ಯಕ್ಷ ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಆರೋಗ್ಯವೆ ಮಾನವನ ದೊಡ್ಡ ಆಸ್ತಿ. ಅದು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಉದ್ಘಾಟಿಸಿದರು. ದಾನಿ ಗೌರಮ್ಮಬಸವೇಗೌಡ, ಕೆ.ಮೋಹನ್, ಡಾ.ಸಿ.ಕೆ.ಸುಬ್ಬರಾಯ, ಲೇಖಕರಾದ ಬೆಳವಾಡಿ ಮಂಜುನಾಥ, ರಮೇಶ್ ಬೊಂಗಾಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.