ADVERTISEMENT

‘ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಚಿಂತನೆ ಅಗತ್ಯ’

ಮೂಡಿಗೆರೆ: ಎರಡು ದಿನಗಳ ಕೃಷಿ ಮೇಳ 2013 ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:58 IST
Last Updated 7 ಡಿಸೆಂಬರ್ 2013, 6:58 IST

ಹ್ಯಾಂಡ್‌ಪೋಸ್ಟ್ (ಮೂಡಿಗೆರೆ): ದಿನದಿಂದ ದಿನಕ್ಕೆ ನಷ್ಟದಂಚಿಗೆ ತಲುಪುತ್ತಿರುವ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ರೈತರ ಆರ್ಥಿಕ ಮಟ್ಟ ಸುಧಾರಣೆಯತ್ತ ಸೂಕ್ತ ಚಿಂತನೆ ನಡೆಯಬೇಕಿದೆ ಎಂದು ತಾ.ಪಂ. ಅಧ್ಯಕ್ಷ ಎಂ.ಎ.ಶೇಷಗಿರಿ ಕಳಸ ಅಭಿಪ್ರಾಯಪಟ್ಟರು.

ಗ್ರಾಮದ ವಲಯ ತೋಟಗಾರಿಕಾ ಕಾಲೇಜು ಆವರಣದಲ್ಲಿ ಶುಕ್ರವಾರ ಪ್ರಾರಂಭವಾದ ಕೃಷಿ ಮೇಳ 2013 ಅನ್ನು ಉದ್ಘಾಟಿಸಿ ಮಾತ­ನಾಡಿದರು.

ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಗಣನೀಯ­ವಾಗಿ ಕುಂಠಿತಗೊಳ್ಳ ತೊಡಗಿದ್ದು ಕಳವಳ ಕಾರಿಯಾಗಿದೆ. ಭತ್ತ ಬೆಳೆಯಲ್ಲಿ ಇಂದು ರೈತರು ಬೆಳೆಗಾಗಿ ಸುರಿಯುವ ಬಂಡವಾಳಕ್ಕಿಂತ ಆದಾಯದ ಪ್ರಮಾಣ ಕಡಿಮೆ ಗೊಂಡಿರುವುದು ಭತ್ತದ ಬೆಳೆಯಲ್ಲಿ ರೈತರಿಗೆ ನಿರಾಸಕ್ತಿ ಮೂಡಲು ಪ್ರಮುಖ ಕಾರಣವಾಗಿದೆ, ಇಂತಹ ಪರಿಸ್ಥಿತಿಯೇ ಮುಂದುವೆರೆದರೆ ಭವಿಷ್ಯದಲ್ಲಿ ಆಹಾರಕ್ಕಾಗಿ ಪರೆದಾಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ. ನಾಗೇಶ್‌ ಮಾತನಾಡಿ, ಸಮಾಜದ ಕೆಳ ಹಂತದ ರೈತರಿಗೆ ಸೂಕ್ತ ಮಾಹಿತಿ ಕೊರತೆಯಿಂದ ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗು­ವಂತಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಸೂಕ್ತವಾಗಿ ಕಾರ್ಯನಿರ್ವಹಿಸಿ, ಮೊದಲ ಹಂತದ ರೈತರೂ ಕೃಷಿಯಿಂದ ಲಾಭ ಪಡೆಯುವಂತಾಗಬೇಕು ಎಂದರು.

ಜಿ.ಪಂ. ಸದಸ್ಯ ಎಂ.ಎಸ್‌. ಅನಂತ್‌ ಮಾತ­ನಾಡಿ, ವಿಜ್ಞಾನಿಗಳು ಮತ್ತು ರೈತರ ನಡುವಿನ ಸಂಪರ್ಕ ಗಣನೀಯ ಪ್ರಮಾಣದಲ್ಲಿ ಬಲ­ಗೊಳ್ಳಬೇಕಿದೆ, ಸಂಶೋಧನೆಗಳು, ಮಾಹಿತಿ­ಗಳು ಸಂಶೋಧನಾ ಕೇಂದ್ರಗಳಲ್ಲಿಯೇ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕಾದ ಜವಾ­ಬ್ದಾರಿ ವಿಜ್ಞಾನಿಗಳ ಮೇಲಿದೆ ಎಂದರು. ಕೃಷಿ ಚಟು­ವಟಿಕೆ­ಯಲ್ಲಿ ಪ್ರಗತಿಯತ್ತ ಸಾಗಬೇಕಾದರೆ ಯಾಂತ್ರೀಕರಣ ಅಗತ್ಯವಾಗಿದ್ದು, ತಂತ್ರಜ್ಞಾನ­ಗಳನ್ನು ಸೂಕ್ತವಾಗಿ ರೈತರ ಬಳಿಗೆ ಕೊಂಡೊಯ್ಯಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಡಾ. ಪಿ.ಎಂ. ಸಾಲಿಮಠ ಮಾತನಾಡಿ, ಮಲೆನಾಡನ್ನು ಬಾದಿಸುತ್ತಿರುವ ಅಡಿಕೆ ಬೆಳೆಯ ಹಳದಿ ರೋಗ, ಕೊಳೆರೋಗಕ್ಕೆ ಸಂಬಂದಿಸಿದಂತೆ ಸಂಶೋಧನೆಗಳು ನಡೆಯು­ತ್ತಿದ್ದು, ಯಶಸ್ವಿಯತ್ತ ಸಾಗಿದ್ದೇವೆ ಮುಂದಿನ ದಿನಗಳಲ್ಲಿ ಈ ರೋಗಗಳಿಂದ ಮುಕ್ತ ಹೊಂದುವ ದಿನಗಳು ಎದುರಾಗಲಿವೆ, ರೈತರು ಮತ್ತು ವಿಜ್ಞಾನಿಗಳ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರಥ ಸಂಪರ್ಕ ಕೇಂದ್ರಗಳಿಗೂ ತಿಂಗಳಿಗೆ ಎರಡು ಬಾರಿ ವಿಜ್ಞಾನಿಗಳು ಭೇಟಿ ನೀಡಿ ಇಡೀ ದಿನ ಕಾರ್ಯನಿರ್ವಹಿಸಿ, ರೈತರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು. ಕಾಳು ಮೆಣಸಿನ ಕೃಷಿಯಲ್ಲಿ ಸಾಧನೆಗೈದ ದಾರದಹಳ್ಳಿ ಸುಧಾ ರಮೇಶ್‌ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ ಎಂ.ಎಸ್‌. ಅನಂತ್‌, ಜ್ಯೋತಿಹೇಮಶೇಖರ್‌, ಗ್ರಾ.ಪಂ. ಸದಸ್ಯ ಪ್ರಭಾಕರ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.