ನರಸಿಂಹರಾಜಪುರ: ಮೀನುಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಲಿಂಗಾಪುರ, ರಾವೂರು ಮೀನು ಕ್ಯಾಂಪ್, ಮೆಣಸೂರು, ಮಾರಿದಿಬ್ಬ ಹಾಗೂ ಹೊನ್ನೆಕೂಡಿಗೆ ಹೊಸ ಸೇತುವೆ ಸಮೀಪದ ಭದ್ರಾ ಹಿನ್ನೀರಿಗೆ 21 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮೀನು ಮರಿಗಳನ್ನು ಹಿನ್ನೀರಿಗೆ ಬಿಡುಗಡೆ ಮಾಡಿದ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ಬಾರಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯರಿಗೆ ಮನವಿ ಮಾಡಿದ್ದರಿಂದ ಚು 21 ಲಕ್ಷ ಮೀನು ಮರಿಗಳನ್ನು ನೀಡಿದ್ದಾರೆ. ಇದರಲ್ಲಿ ಕಾಟ್ಲಾ, ಗೌರಿ, ರೊಹ್ ತಳಿಯ ಮೀನು ಮರಿಗಳಿವೆ. ಮೀನುಗಾರರು ಇದರ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ರಾವೂರಿನ ಗುಳ್ಳೆ ಮಾರಿಯಮ್ಮ ದೇವಸ್ಥಾನದ ಕಾಮಗಾರಿಗೆ ಹಣಕಾಸಿನ ನೆರವು ನೀಡಲಾಗುವುದು. ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ರಾಮ ದೇವಸ್ಥಾನಕ್ಕೆ ಅನುದಾನ ನೀಡಲಾಗಿದ್ದು ದೇವಸ್ಥಾನ ಪೂರ್ಣವಾದ ನಂತರ ಲೋಕಾರ್ಪಣೆ ಮಾಡಲಾಗುವುದು ಎಂದರು.
ಅಕಾಲಿಕ ಮಳೆಯಿಂದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಳೆ ಸಂಪೂರ್ಣವಾಗಿ ನಿಂತು ರಸ್ತೆ ಒಣಗಿದ ನಂತರ ಮತ್ತೆ ಕೆಲಸ ಪ್ರಾರಂಭಿಸಲಾಗುತ್ತದೆ. ರಸ್ತೆ ಬದಿಯ ಜಂಗಲ್ ಕ್ಲಿಯರೆನ್ಸ್ ಮುಂದುವರಿಸಲಾಗುವುದು ಎಂದರು. ನರಸಿಂಹರಾಜಪುರ ಪಟ್ಟಣದಲ್ಲೂ ಮಳೆಯಿಂದ ರಸ್ತೆ ಹಾಳಾಗಿದೆ. ಪಟ್ಟಣ ಪಂಚಾಯಿತಿ ಸದಸ್ಯರ ಬೇಡಿಕೆಯಂತೆ ಮಳೆ ನಿಂತ ಕೂಡಲೇ ಶಾಸಕರ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಅಗತ್ಯವಿದ್ದ ಕಡೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುವುದು ಎಂದರು.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಆಲ್ದಾರ ಭಾಗದಲ್ಲಿ ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಆನೆಗಳು ಬರದಂತೆ 3 ಕಿ.ಮೀಗೆ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಇನ್ನೂ ಹೆಚ್ಚುವರಿ 3 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕಲು ಹಣ ಮಂಜೂರು ಮಾಡಲಾಗುವುದು. ಹಂತ, ಹಂತವಾಗಿ ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಲು ಆದ್ಯತೆ ನೀಡಿ ಆನೆಗಳು ಜನವಸತಿ ಪ್ರದೇಶಕ್ಕೆ ಬರದಂತೆ ಶಾಶ್ವತ ಕಾಮಗಾರಿಗಳನ್ನು ಮಾಡಲಾಗುವುದು’ ಎಂದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸಹನಾದಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀಲ್ ಕುಮಾರ್, ಬಿನು, ಮಂಜು, ಮುಖಂಡರಾದ ಬಿ.ಎಸ್.ಸುಬ್ರಮಣ್ಯ, ಶಿವಣ್ಣ, ಎಂ.ಆರ್. ರವಿಶಂಕರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.