ADVERTISEMENT

30 ವರ್ಷಗಳ ವಿವಾದಕ್ಕೆ ತೆರೆ

ಶಾಸಕ ವೈ.ಎಸ್.ವಿ.ದತ್ತ ಮಧ್ಯಸ್ಥಿಕೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 8:31 IST
Last Updated 12 ಅಕ್ಟೋಬರ್ 2017, 8:31 IST

ಬೀರೂರು: ಸಮೀಪದ ಯರೇಹಳ್ಳಿಯಲ್ಲಿ 30 ವರ್ಷದಿಂದ ಕಗ್ಗಂಟಾಗಿದ್ದ ನಿವೇಶನ ಸಮಸ್ಯೆಯನ್ನು ಶಾಸಕರ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸಲಾಯಿತು.

ಯರೇಹಳ್ಳಿ ಗ್ರಾಮದಲ್ಲಿ 30 ವರ್ಷಗಳ ಹಿಂದೆ ದಲಿತರಿಗೆ ಜನತಾ ಮನೆಗಳನ್ನು ನೀಡಲಾಗಿತ್ತು, 25 ಕುಟುಂಬ ಅಲ್ಲಿ ವಾಸವಿದ್ದು ಇತ್ತೀಚಿನವರೆಗೂ ಗ್ರಾಮದಲ್ಲಿ ವಾತಾವರಣ ಚೆನ್ನಾಗಿಯೇ ಇತ್ತು. ಗ್ರಾಮದ ಸ.ನಂ 4ರಲ್ಲಿ ಅರಣ್ಯ ಇಲಾಖೆಯು ಸುಮಾರು 400 ಎಕರೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯದ ಯೋಜನೆಯಲ್ಲಿ ನೀಲಗಿರಿ ನೆಡುತೋಪು ಬೆಳೆಸಿ ಅವಧಿ ಮುಗಿದ ಬಳಿಕ ತೋಪನ್ನು ತೆರವುಗೊಳಿಸಲಾಗಿತ್ತು. ಗ್ರಾಮದ ತೆಲುಗುಗೌಡ ಜನಾಂಗದವರು ಈ ಭೂಮಿಯನ್ನು ಕುಟುಂಬಕ್ಕೆ ಇಷ್ಟು ಎಂದು ಹಂಚಿಕೊಂಡು ದಲಿತರನ್ನು ಕಡೆಗಣಿಸಿದ್ದರು ಎನ್ನುವುದು ದಲಿತ ಕುಟುಂಬಗಳ ದೂರಾಗಿತ್ತು.

‘ನಾವು ಇಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ನಮ್ಮ ಕುಟುಂಬಗಳೂ ಬೆಳೆದಿವೆ, ಮನೆ, ಶೌಚಾಲಯ ನಿರ್ಮಿ ಸಲು ಜಾಗದ ಕೊರತೆ ಇದೆ, ಒಕ್ಕಲು ಮಾಡಲು ಭೂಮಿ ಮತ್ತು ಕಣ ಮಾಡಲು ಜಾಗದ ಅವಶ್ಯಕತೆ ಇದೆ’ ಎನ್ನುವ ಮನವಿಗೆ ಗ್ರಾಮಸ್ಥರು ಒಗೊಟ್ಟಿರಲಿಲ್ಲ. ಈ ವಿಷಯವಾಗಿ ಎರಡು ವರ್ಷದ ಹಿಂದೆ ಬಹಿಷ್ಕಾರದಂತಹ ಪ್ರಕರಣಗಳೂ ನಡೆದು ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು.

ADVERTISEMENT

ಕಡೆಗೆ ದಲಿತ ಮುಖಂಡರು ಮತ್ತು ತೆಲುಗುಗೌಡ ಮುಖ್ಯಸ್ಥರು ಶಾಸಕ ದತ್ತ ಅವರನ್ನು ಸಮಸ್ಯೆ ಬಗೆಹರಿಸುವಂತೆ ಕೋರಿದಾಗ ಮಂಗಳವಾರ ಕಡೂರು ತಹಶೀಲ್ದಾರ್, ಕಂದಾಯಾಧಿಕಾರಿ ಮತ್ತು ಸರ್ವೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದ ಶಾಸಕ ದತ್ತ ಗ್ರಾಮದ ಸಮುದಾಯ ಭವನದಲ್ಲಿ ಸಮನ್ವಯ ಸಭೆ ನಡೆಸಿ ಎರಡೂ ಪಂಗಡದವರ ಅಹವಾಲು ಆಲಿಸಿದರು.

ನಂತರ ಮಾತನಾಡಿದ ಅವರು, ‘ಈ ಹಿಂದೆ ನಡೆದ ಘಟನೆಗಳು ಮುಂದುವರೆಯುವುದು ಬೇಡ, ಗ್ರಾಮದಲ್ಲಿ ಶಾಂತಿಯುತ ಜೀವನ ನಡೆಯಬೇಕು ಎನ್ನುವುದು ನನ್ನ ಆಶಯ, ದಲಿತ ವರ್ಗದ ಜನರ ಕಲ್ಯಾಣಕ್ಕಾಗಿ ಸರ್ಕಾರವೇ ಹಣ ನೀಡಿದೆ, ಆದರೆ ಕಚ್ಚಾಟದಿಂದ ಯಾರಿಗೂ ಉಪಯೋಗವಾಗುವುದಿಲ್ಲ. ನೀವೆಲ್ಲ ಅನುಮೋದನೆ ನೀಡುವುದಾದರೆ ಗ್ರಾಮದ ಸರ್ವೆ ನಂ.51ರಲ್ಲಿ 5ಎಕರೆ ಭೂಮಿ ಗುರುತಿಸಿ ಅದರಲ್ಲಿ ದಲಿತ ಜನಾಂಗಕ್ಕೆ ನಿವೇಶನ, ಶೌಚಾಲಯ, ಒಕ್ಕಲು ಕಣ ಮಾಡಲು ಜಾಗ ಗುರುತಿಸಿಕೊಡಲಾಗುವುದು ಎಂದು ತಿಳಿಸಿದರು.

ನಂತರ ಗ್ರಾಮಸ್ಥರು ಸರ್ವೆ ನಂ.4ರಲ್ಲಿ 78 ರೈತರಿಗೆ ಸಾಗುವಳಿ ಚೀಟಿ ಕೊಟ್ಟಿಲ್ಲ, ಬಗರ್‌ಹುಕುಂ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುವುದರಿಂದ ಸಾಗುವಳಿ ಚೀಟಿ ಕೊಡಿಸಬೇಕು ಎಂದು ಶಾಸಕರ ಗಮನಕ್ಕೆ ತಂದರು. 55 ಜನರಿಗೆ ಸರ್ಕಾರದ ಸ್ವೀಕೃತಿ ಪತ್ರ ದೊರೆತಿದ್ದು ಉಳಿದವರ ಮಾಹಿತಿ ಕಚೇರಿ ಕಡತದಲ್ಲಿಯೇ ಲಭ್ಯವಿಲ್ಲ. ಹಾಗಾಗಿ ನಮಗೆ ನೀವು ಜಮೀನಿನ ಮೇಲಿನ ಹಕ್ಕು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಶೂದ್ರ ಶ್ರೀನಿವಾಸ್, ಎಂಆರ್‍ಎಚ್‍ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಚಂದ್ರಶೇಖರ್, ಕಡೂರು ಕೃಷ್ಣ, ಗೋವಿಂದಸ್ವಾಮಿ, ಕೋಡಿಹಳ್ಳಿ ಮಹೇಶ್ವ ರಪ್ಪ, ತಹಶೀಲ್ದಾರ್ ಎಂ.ಭಾಗ್ಯ, ಕಂದಾಯಾಧಿಕಾರಿ ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.