ADVERTISEMENT

₹36 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 7:13 IST
Last Updated 21 ನವೆಂಬರ್ 2017, 7:13 IST

ನೇಮನಹಳ್ಳಿ(ಬಾಳೆಹೊನ್ನೂರು): ಶೃಂಗೇರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ 35 ಕಿಮೀ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ಅಡಿಯಲ್ಲಿ ಸುಮಾರು ₹36 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.

ನರಸಿಂಹರಾಜಪುರ ತಾಲ್ಲೂಕಿನ ಬನ್ನೂರು ಗ್ರಾಮದ ನೇಮನಹಳ್ಳಿಯಿಂದ ಚಿಟ್ಟೆಮಕ್ಕಿ ಮೂಲಕ ಬಾಳೆಹೊನ್ನೂರು ಸಂಪರ್ಕ ಕಲ್ಪಿಸುವ 2 ಕಿಮೀ ರಸ್ತೆ ಅಭಿವೃದ್ಧಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

2015–16ನೇ ಸಾಲಿನ ಬಜೆಟ್ ಅನುದಾನದಲ್ಲಿ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ನಿಧಾನವಾದ ಕಾರಣ ಕಾಮಗಾರಿ ವಿಳಂಬವಾಗಿದೆ. 2016–17 ನೇ ಸಾಲಿನಲ್ಲಿ ಈ ಯೋಜನೆಗೆ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಿಲ್ಲದಿರುವುದು ದುರುದೃಷ್ಟಕರ ಎಂದರು.

ADVERTISEMENT

ಬಾಳೆಹೊನ್ನೂರಿನ ಜೇಸಿ ವೃತ್ತದಿಂದ ಚೌಡಿಕೆರೆ ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಾದ್ಯಂತ ₹50 ಕೋಟಿಗೂ ಅಧಿಕ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳು ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲೇ ಮುಗಿಯಲಿವೆ.
ಹಣ ಇಲ್ಲದ ಕಾರಣ ಕಾಮಗಾರಿಗಳು ಮುಗಿಯುವುದಿಲ್ಲ ಎಂದು ಕೆಲವು ನಾಯಕರು ರಸ್ತೆ ಅಭಿವೃದ್ಧಿ ಶಂಕುಸ್ಥಾಪನೆಯನ್ನು ಲೇವಡಿ ಮಾಡುತ್ತಿದ್ದಾರೆ ಎಂದರು.

‘ಸಂವಿಧಾನಬದ್ಧ ಅಧಿಕಾರ ಹೊಂದಿರುವ ಶಾಸಕರು ಮಾತ್ರ ಕ್ಷೇತ್ರದ ರಸ್ತೆಯನ್ನು ಅಭಿವೃದ್ದಿಗಾಗಿ ಆಯ್ಕೆ ಮಾಡಬೇಕು. ನಾವು ನೀಡುವ ಪತ್ರದ ಆಧಾರದ ಮೇಲೆ ಎಂಜಿನಿಯರ್‌ಗಳು ಎಸ್ಟಿಮೇಟ್ ಮಾಡಿ ಕಳುಹಿಸಿದ್ದು, ನಂತರ ಅನುಮೋದನೆ ಆಗಲಿದೆ. ನಾನು ಕರ್ನಾಟಕ ಸರ್ಕಾರದ ಶಾಸಕ, ಕೆಲವರು ರಾಜ್ಯ ಸರ್ಕಾರದ ಹಣ ಎಂದು ಬ್ಯಾನರ್ ಹಾಕುತ್ತಿದ್ದಾರೆ. ಸರ್ಕಾರವೇ ಹಣ ನೀಡಬೇಕು.ಇದು ಸತ್ಯ. ನನಗೆ ಪಕ್ಷ ಮಾತ್ರ ಬಿಜೆಪಿ’ ಎಂದರು.

ಕೊಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉದಯ್, ಸಂತೋಷ್ ಅರೇನೂರು, ಬಿಜೆಪಿ ಮುಖಂಡ ಕಲ್ಮಕ್ಕಿ ಟಿ.ಎಂ.ಉಮೇಶ್‌, ಬಿಜೆಪಿ ವಕ್ತಾರ ಬಿ.ಜಗದೀಶ್ಚಂದ್ರ, ಕೆ.ಸಿ.ವೆಂಕಟೇಶ್, ಜಗದೀಶ್ ದಿಡಿಗೆಮನೆ, ಸುಧಾಕರ್ ದಿಡಿಗೆಮನೆ, ಬರಗಲ್ಲು ಚೆನ್ನಕೇಶವ್, ನಾಗರಾಜ್ ಕೆ.ಟಿ.ವೆಂಕಟೇಶ್ ಇದ್ದರು.

* * 

ಯಾವುದೇ ಕಾರಣಕ್ಕೂ ಶಂಕುಸ್ಥಾಪನೆಗೊಂಡ ಕಾಮಗಾರಿಗಳು ಮಧ್ಯದಲ್ಲಿ ನಿಲ್ಲಿಸುವುದಿಲ್ಲ. ಎಲ್ಲ ಕಾಮಗಾರಿಗಳಿಗೂ ಸಾಕಷ್ಟು ಹಣ ನೀಡಲಾಗಿದೆ
ಡಿ.ಎನ್.ಜೀವರಾಜ್
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.