ADVERTISEMENT

ತಂತ್ರಜ್ಞಾನವನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 5:54 IST
Last Updated 11 ಜನವರಿ 2018, 5:54 IST

ನರಸಿಂಹರಾಜಪುರ: ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ತಮ್ಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕೆಂದು ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಕಮಲ್‌ಬಾಬು ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಮತ್ತು ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ‘ಜಾಗತೀಕರಣ ಮತ್ತು ಆಧುನಿಕ ಸವಾಲುಗಳು’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಪ್ರಸ್ತುತ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸಮಾಜಕ್ಕೆ ಮಾರಕವಾಗುತ್ತಿದ್ದಾರೆ. ತಂತ್ರಜ್ಞಾನದ ಉದ್ದೇಶ ದೇಶದ ಅಭಿವೃದ್ಧಿಪಥದತ್ತ ಕೊಂಡೊಯ್ಯುವುದಾಗಿದ್ದು, ಪ್ರತಿಯೊಬ್ಬರು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ತಮ್ಮದೇ ಆಗಿರಬೇಕು. ಯಾರನ್ನು ಅವಲಂಭಿಸಿ ಗುರಿಯನ್ನ ತಲುಪಬಾರದು’ ಎಂದರು.

ADVERTISEMENT

‘ಗ್ರಾಮೀಣ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಇಂಟರ್‌ನೆಟ್‌, ಫೇಸ್‌ಬುಕ್ ಇತ್ಯಾದಿಗಳು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವ ವಿಷಯಗಳ ಉಪಯೋಗಕ್ಕೆ ಬಳಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಗುರಿ ಮುಟ್ಟಲು ಪ್ರಯತ್ನಿಸಬೇಕು. ಬೆರಳ ತುದಿಯಲ್ಲಿಯೇ ಜಗತ್ತನ್ನು ಸ್ಪರ್ಶಿಸುವ ಇ–ಗ್ರಂಥಾಲಯ ಮುಂತಾದ ಶೈಕ್ಷಣಿಕ ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳಬೇಕು. ಕಳೆದು ಹೋದ ಸಮಯ ಪುನಃ ಸಿಗದಿರುವುದರಿಂದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಲಕ್ಷ್ಮಣನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ಸಮಾಜದಲ್ಲಾಗುತ್ತಿರುವ ಬದಲಾವಣೆಗಳು ಮತ್ತು ಸಮಾಜ ವಿಜ್ಞಾನಗಳ ಅಳಿವು ಉಳಿವಿನ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಕೆ.ಪೂರ್ಣೇಶ್ ವಹಿಸಿ ಮಾತನಾಡಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್, ಸಮಾಜ ಶಾಸ್ತ್ರ ಉಪನ್ಯಾಸಕ ಐ.ಎಂ.ರಾಜೀವ, ಉಪನ್ಯಾಸಕರಾದ ಡಾ.ಅಣ್ಣಪ್ಪ ಎನ್.ಮಳೀಮಠ್, ದಿನಕರನಾಯ್ಕ,ರುಖಿಯತ್, ಹೇಮಲತಾ, ಸತೀಶ್, ವಿಶ್ವನಾಥ್, ಗ್ರಂಥಪಾಲಕ ಕೃಷ್ಣನಾಯ್ಕ. ವಿದ್ಯಾರ್ಥಿಗಳಾದ ನಿಸರ್ಗ, ಬೇಸಿಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.