ADVERTISEMENT

7 ಹೋಬಳಿ ಬರಪೀಡಿತ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 9:45 IST
Last Updated 10 ಸೆಪ್ಟೆಂಬರ್ 2011, 9:45 IST

ಚಿಕ್ಕಮಗಳೂರು: ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲ್ಲೂಕುಗಳ ಏಳು ಹೋಬಳಿಗಳನ್ನು ಬರಪೀಡಿತ ಪ್ರದೇಶ ವೆಂದು ಘೋಷಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ ತಿಳಿಸಿದರು.

ಕಡೂರು ತಾಲ್ಲೂಕಿನ ಕೆಲವು ಹೋಬಳಿಗಳಿಗೆ ಭೇಟಿ ನೀಡಿದಾಗ ಬರಪೀಡಿತ ಪ್ರದೇಶವಾಗುವ ಲಕ್ಷ್ಮಣಗಳು ಕಂಡುಬರುತ್ತಿವೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರ್ಥಿಕ ಬೆಳೆಗಳಾದ ಸೂರ್ಯಕಾಂತಿ, ಶೇಂಗಾ, ಎಳ್ಳು, ಹೆಸರು, ಉದ್ದು ಬಿತ್ತನೆಯಾಗಿಲ್ಲ. ಯಗಟಿ, ಪಂಚನಹಳ್ಳಿಯಲ್ಲಿ ಬಿತ್ತನೆ ಆಗಿರುವ ರಾಗಿ ಮೊಳಕೆಯೊಡೆದು ಮಳೆಯಾಗದೆ ಸುಟ್ಟುಹೋಗಿದೆ.

ಪಾದಮನೆಯಲ್ಲಿ ಬೆಳೆದಿರುವ ಆಲೂಗೆಡ್ಡೆ ಇಳುವರಿ ಕುಂಠಿತಗೊಂಡಿದೆ. ಈ ಮೂರು ತಾಲ್ಲೂಕಿನ ಮಳೆಯಾಗದ ಪ್ರದೇಶಗಳಲ್ಲಿ ರೈತರು ಪಡೆದಿರುವ ಬೆಳೆಸಾಲ ಮನ್ನಾಮಾಡಬೇಕು. ಸಾಧ್ಯವಾಗದಿದ್ದರೆ ಬಡ್ಡಿಯನ್ನಾದರೂ ಮನ್ನಾ ಮಾಡುವಂತೆ ಇದೇ 13ರಂದು ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿಗಳನ್ನು ಕೋರಲಾಗುವುದೆಂದು ತಿಳಿಸಿದರು.

ಕಡೂರು ತಾಲ್ಲೂಕಿನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಉದ್ಯೋಗ ಒದಗಿಸಲು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 7754.74 ಲಕ್ಷ ರೂಪಾಯಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದು, 12,237 ಕಾಮಗಾರಿಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 805.99 ಲಕ್ಷ ರೂಪಾಯಿ ಅನುದಾನ ಲಭ್ಯವಿದೆ. ಉದ್ಯೋಗ ಕೋರುವವರಿಗೆ ಮೊದಲ ಆದ್ಯತೆಯಾಗಿ ಕೆಲಸ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಮತ್ತು ಲಕ್ಯಾ ಹೋಬಳಿಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಈ ಎರಡು ಹೋಬಳಿಗಳ ಪಂಚಾಯಿತಿಗಳಲ್ಲಿ ಅನುದಾನ ಲಭ್ಯವಿದ್ದು, ಸೂಕ್ತ ಉದ್ಯೋಗ ಒದಗಿಸಲಾಗುವುದೆಂದು ತಿಳಿಸಿದರು.

ಮಳೆ ಪ್ರಮಾಣ: ಜಿಲ್ಲೆಯಲ್ಲಿ ವಾಡಿಕೆ ಮಳೆ 1904 ಮಿ.ಮೀ. ಬದಲಾಗಿ ಆಗಸ್ಟ್ ಅಂತ್ಯದವರೆಗೆ 1528 ಮಿ.ಮೀ. ಮಳೆಯಾಗಿದೆ. ಕಡೂರು ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತ ಸರಾಸರಿ ಶೇ.67ರಷ್ಟು ಮಳೆಯಾಗಿದೆ.

ಬಿತ್ತನೆ: ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 160980 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, 133411 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ.82.9ರಷ್ಟು ಬಿತ್ತನೆಯಾಗಿದೆ. ಕಡೂರು ತಾಲ್ಲೂಕಿನಲ್ಲಿ 74360 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ 20840 ಹೆಕ್ಟೇರ್ ಪ್ರದೇಶದಲ್ಲಿ  ಬಿತ್ತನೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ಈ ತಾಲ್ಲೂಕಿನ 8 ಹೋಬಳಿಗಳಲ್ಲಿ ಬೀರೂರು, ಹಿರೇ ನಲ್ಲೂರು, ಸಖರಾಯಪಟ್ಟಣ ಹೋಬಳಿಗಳಲ್ಲಿ ಬಿತ್ತನೆಯಾ ಗಿರುವ ಸೂರ್ಯಾಕಾಂತಿ, ನೆಲಗಡೆಲೆ, ರಾಗಿ, ಮುಸುಕಿನಜೋಳ ಬೆಳೆಗಳು ಸಾಧಾರಣವಾಗಿವೆ. ಯಗಟಿ, ಸಿಂಗಟಗೆರೆ, ಪಂಚನಹಳ್ಳಿ, ಚೌಳಹಿರಿಯೂರು, ಕಸಬಾ ಹೋಬಳಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ಭಾಗಗಳಲ್ಲಿ ಆರ್ಥಿಕ ಬೆಳೆಗಳು ಶೇ.60ರಷ್ಟು ಇಳುವರಿ ಕಡಿಮೆಯಾಗಲಿದೆ ಎಂದರು.

ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯಲ್ಲಿ ಎಳ್ಳು, ಸೂರ್ಯಕಾಂತಿ, ಮುಸುಕಿನ ಜೋಳ, ಹೆಸರು, ರಾಗಿ, ಬಿತ್ತನೆಯಾಗಿದೆ. 2750 ಹೆಕ್ಟೇರ್‌ನಲ್ಲಿ ಇಳುವರಿ ಶೇ.75ರಷ್ಟು ಕುಂಠಿತವಾಗಲಿದೆ ಎಂದು ಹೇಳಿದರು.

ಕುಡಿಯುವ ನೀರು: ಕಡೂರು ತಾಲ್ಲೂಕಿನಲ್ಲಿ ಮಳೆ ಅಭಾವದಿಂದ ಕುಡಿಯುವ ನೀರಿನ ಪರಿಸ್ಥಿತಿ ತಲೆದೋರುವ ಸಾಧ್ಯತೆಗಳಿವೆ. ಹೀಗಾಗಿ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರ ಕೋರಲಾಗಿದೆ ಎಂದರು.

ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಮತ್ತು ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯಲ್ಲೂ ಮಳೆ ಪ್ರಮಾಣ ಕ್ಷೀಣಿಸಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೇವು ದಾಸ್ತಾನು: ಕಡೂರು ತಾಲ್ಲೂಕಿನಲ್ಲಿ 52310 ಟನ್ ಮೇವು ದಾಸ್ತಾನಿದೆ. 9 ವಾರಗಳವರೆಗೆ ಮೇವು ಆಗುಲಿದೆ. ಮುಂದೆ ಮಳೆ ಬಾರದಿದ್ದರೆ 4 ಸಾವಿರ ಮಿನಿ ಕಿಟ್ಸ್‌ಗಳನ್ನು ಅಂದಾಜು ರೂ.20,00000 ವೆಚ್ಚದಲ್ಲಿ ಖರೀದಿಸಿ ನೀರಾವರಿ ಸೌಲಭ್ಯವುಳ್ಳ ಜಮೀನಿನ ರೈತರಿಗೆ ವಿತರಿಸಿ ಬರಪರಿಸ್ಥಿತಿ ನಿಭಾಯಿಸಲು ಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಗೂ ಮೊದಲು ಜಿಪಂ ಅಧ್ಯಕ್ಷರು ಬಯಲು ಸೀಮೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಬಗ್ಗೆ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ, ಸದಸ್ಯರಾದ ಕಲ್ಮರಡಪ್ಪ, ರೇಖಾ ಹುಲಿಯಪ್ಪಗೌಡ, ಸತೀಶ್, ಚಿಕ್ಕಮ್ಮ ಮಲ್ಲಪ್ಪ, ಶಶಿರೇಖಾ ಸುರೇಶ್, ಮಾಲಿನಿಬಾಯಿ ರಾಜ ನಾಯ್ಕ, ಕಡೂರು ತಾ.ಪಂ ಅಧ್ಯಕ್ಷೆ ರತ್ಮಮ್ಮ ಇದ್ದರು.

ನೀರು ಪೂರೈಕೆಗೆ ಜಿ.ಪ ಅಧ್ಯಕ್ಷೆ ಸೂಚನೆ
ಚಿಕ್ಕಮಗಳೂರು:
ಜಿಲ್ಲೆಯ ಕಡೂರು ತಾಲ್ಲೂಕು, ಶಿವನಿ ಹಾಗೂ ಲಕ್ಯಾ ಹೋಬಳಿಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೇ ಬರಪೀಡಿತ ಪ್ರದೇಶವಾಗುವ ಲಕ್ಷಣಗಳಿವೆ. ಆ ಭಾಗದಲ್ಲಿ ಕುಡಿಯುವ ನೀರು ಹಾಗೂ ಜಾನುವಾರು ಮೇವಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರಫುಲ್ಲಾ ಬಿ. ಮಂಜುನಾಥ್ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.