ಮೂಡಿಗೆರೆ: ‘ದೇಶದಲ್ಲಿ ನ್ಯಾಯದ ಪರವಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರನ್ನು ಕೇಂದ್ರ ಸರ್ಕಾರ ಬಂಧಿಸಿದೆ’ ಎಂದು ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಯು. ಶರೀಫ್ ಆರೋಪಿಸಿದರು.
ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರ ಬಂಧನ ಖಂಡಿಸಿ ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ದೇಶದಾದ್ಯಂತ ಮುಸ್ಲಿಮರು, ಪರಿಶಿಷ್ಟರು ಸೇರಿದಂತೆ ತುಳಿತಕ್ಕೊಳಗಾದ ಸಮುದಾಯಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರುದ್ಧ ಎಸ್‌ಡಿಪಿಐ ನ್ಯಾಯಯುತ ಹೋರಾಟವನ್ನು ನಡೆಸುತ್ತಿದೆ. ಇದನ್ನು ಸಹಿಸದ ಕೇಂದ್ರ, ಮುಸ್ಲಿಂ ಧಾರ್ಮಿಕ ಸಂಸ್ಥೆಗಳಿಗೆ ದಾನವಾಗಿ ಬಂದಿರುವ ಜಮೀನಿನ ಮೇಲೆ ಕಣ್ಣು ಹಾಕಿದೆ. ಆ ಜಾಗವನ್ನು ಹೇಗಾದರೂ ಮಾಡಿ ಕಬಳಿಸಬೇಕೆಂದು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇಂತಹ ತಿದ್ದುಪಡಿಗೆ ಎಸ್‌ಡಿಪಿಐ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಫೈಝಿ ಅವರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ಹೋರಾಟ ಮಾಡಲಾಗುವುದುʼ ಎಂದರು.
ಬ್ಯಾರಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಚ್. ಮಹಮ್ಮದ್ ಮಾತನಾಡಿ, ʼಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋರಾಟಗಳು ನಿರಂತರವಾಗಿ ನಡೆಯುತ್ತವೆ. ಅದನ್ನು ಹತ್ತಿಕ್ಕುವ ಸಲುವಾಗಿ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರನ್ನು ಬಂಧಿಸಿ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಇಂತಹ ಧೋರಣೆಯ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಯಾವುದೇ ಕಾರಣವಿಲ್ಲದೆ ಬಂಧಿಸಿರುವ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರನ್ನು ಕೂಡಲೆ ಬಿಡುಗಡೆ ಮಾಡಬೇಕುʼ ಎಂದು ಒತ್ತಾಯಿಸಿದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ರಿಜ್ವಾನ್, ಮುಖಂಡರಾದ ಕೆ.ಪಿ. ಖಾಲಿದ್, ಸಾದಿಕ್, ಸಾಹುಲ್, ಹಬೀಬ್, ಅಶ್ರಫ್, ನಿಸಾರ್ ಅಹಮದ್, ಪಿ.ಕೆ. ಹನೀಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.