ಮತ್ತಿಮರ (ನರಸಿಂಹರಾಜಪುರ): ಮಾನವೀಯತೆ ದೃಷ್ಟಿಯಿಂದ ಅನಾಥಾಶ್ರಮದಲ್ಲಿರುವ ಅನಾಥರು ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಆಧಾರ್ ಕಾರ್ಡ್ ಮಾಡಿಸಲಾಗುತ್ತಿದೆ ಎಂದು ತಹಶೀಲ್ದಾರ್ ನೂರುಲ್ ಹುದಾ ಹೇಳಿದರು.
ತಾಲ್ಲೂಕಿನ ಬಿ.ಎಚ್.ಕೈಮರ ಸಮೀಪದ ಮತ್ತಿಮರ ದಿವ್ಯ ಕಾರುಣ್ಯ ಆನಂದಾಶ್ರಮದಲ್ಲಿ ಅನಾಥರಿಗೆ ಆಧಾರ್ ಮಾಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವೀಯತೆ ದೃಷ್ಟಿಯಿಂದ ಸರ್ಕಾರದ ಅಧಿಕಾರಿಗಳು ಅನಾಥಾಶ್ರಮಕ್ಕೆ ಬಂದು ಆಧಾರ್ ಮಾಡಿಸಿಕೊಡುತ್ತಿದ್ದಾರೆ. ಇದರಿಂದ ಸರ್ಕಾರದಿಂದ ಪಿಂಚಣಿ, ಪಡಿತರ ಲಭಿಸಲಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಪಟ್ಟಣದ ಹಲವು ವಾರ್ಡ್ ಹಾಗೂ ತಾಲ್ಲೂಕಿನ ಅನಾಥಾ ಶ್ರಮದ ಅನೇಕರಿಗೆ ಆಧಾರ್ ಕಾರ್ಡ್ ಇಲ್ಲದೆ ಇರುವುದು ಗಮನಕ್ಕೆ ಬಂದಿತ್ತು. ಇದರಿಂದ ಅನೇಕ ವೃದ್ಧರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಪ್ರಸ್ತಾಪವಾಗಿತ್ತು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀರಭದ್ರಯ್ಯ ಮಾಜಿ ಗೌಡರ್ ಮಾತನಾಡಿ, ತಾಲ್ಲೂಕಿನ 4 ಅನಾಥಾಶ್ರಮಗಳಿದ್ದು ಯಾರಿಗೂ ಆಧಾರ್ ಕಾರ್ಡ್ ಇರಲಿಲ್ಲ. ಇದರಿಂದ ಸೌಲಭ್ಯ ವಂಚಿತರಾಗಿದ್ದರು. ಅನಾಥ ವೃದ್ಧರಿಗೆ ಇಲಾಖೆ ವತಿಯಿಂದ ಆಧಾರ್ ಕಾರ್ಡ್ ಮಾಡಿಸಲಾಗುತ್ತಿದೆ ಎಂದರು.
ದಿವ್ಯ ಕಾರುಣ್ಯ ಅನಂದಾಶ್ರಮದ ಮುಖ್ಯಸ್ಥೆ ಲಿಸ್ಸಿ, ಅಂಚೆ ಕಚೇರಿ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.