ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್‌ಗಳ ಮೂಲಕ ನಡೆಸುವ ರಾಜ್ಯ ಸರ್ಕಾರದ ಕ್ರಮವನ್ನು ಆಮ್ ಅದ್ಮಿ ಪಕ್ಷ ಸ್ವಾಗತಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.
ಇತ್ತೀಚಿಗೆ ಅನೇಕ ರಾಜ್ಯಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತಗಳ್ಳತನ ಆಗಿದೆ ಎಂಬ ಸಾಕ್ಷ್ಯ ಸಮೇತದ ಇಂಡಿಯಾ ಒಕ್ಕೂಟದ ನಾಯಕರು ಗುರುತರ ಆರೋಪಗಳಿಗೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮತ್ತೊಂದು ಕಡೆ ಆರೋಪಿ ಸ್ಥಾನದ ಕೇಂದ್ರ ಚುನಾವಣಾ ಆಯೋಗವು ಸೂಕ್ತ ಸ್ಪಷ್ಟೀಕರಣ ನೀಡದೆ ಆರೋಪ ಮಾಡಿದ್ದ ನಾಯಕರ ವಿರುದ್ಧವೇ ರಾಜಕೀಯ ಪ್ರತಿಕ್ರಿಯನ್ನು ನೀಡಿ ಮುಚ್ಚಿ ಹಾಕುವ ತಂತ್ರಗಾರಿಕೆಯಲ್ಲಿ ತೊಡಗಿತ್ತು ಎಂದು ದೂರಿದರು.
ಈ ನಡೆಯಿಂದಾಗಿ ಕೇಂದ್ರ ಚುನಾವಣೆ ಆಯೋಗಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಸುಧಾರಣ ಕ್ರಮಗಳನ್ನು ಕೈಗೊಳ್ಳುವ ಇಚ್ಚೆ ಇಲ್ಲದಿರುವುದು ದೇಶದ ಜನರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದ್ದರಿಂದ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದನ್ನು ಸ್ವಾಗತಿಸುತ್ತದೆ ಎಂದು ಹೇಳಿದರು.
ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಈ ಅಪಪ್ರಚಾರದ ಹಿಂದೆ ಇರುವ ಷಡ್ಯಂತ್ರದ ರೂವಾರಿಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ಅವರಿಗೆ ಶಿಕ್ಷೆವಿಧಿಸಬೇಕು ಎಂದು ಒತ್ತಾಯಿಸಿದರು.
ಆಮ್ ಅದ್ಮಿ ಪಕ್ಷದ ಮಾಧ್ಯಮ ಸಲಹೆಗಾರ ಸುಂದರೇಗೌಡ ಮಾತನಾಡಿ, ಚಿಕ್ಕಮಗಳೂರಿನಿಂದ ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 3000 ಮರಗಳ ಕಡಿಯಲಾಗಿದ್ದು, ಈ ಹಿಂದೆ ಒಪ್ಪಂದದಂತೆ ಮರ ಗಿಡಗಳನ್ನು ಬೆಳೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಚಿಕ್ಕಮಗಳೂರಿನಿಂದ ಮೂಡಿಗೆರೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮರ ಕಡಿದರೆ, ಬದಲಿ ಸಸಿಗಳನ್ನು ನೆಡ ಬೇಕು. ಇಲ್ಲವಾದರೆ ಅಪ್ಪಿಕೊ ಚಳವಳಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಈರೇಗೌಡ, ವಾಸಿರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.