ಅಜ್ಜಂಪುರ: ಸುಸಜ್ಜಿತ ಕಟ್ಟಡ, ಪ್ರತಿ ಕೊಠಡಿ ಸ್ಮಾರ್ಟ್ ಕ್ಲಾಸ್, ಟಿ.ವಿ, ಪ್ರೊಜೆಕ್ಟರ್, ಇಂಟರ್‌ನೆಟ್ ಸೌಲಭ್ಯ, ಸಿ.ಸಿ.ಟಿ.ವಿ. ಕ್ಯಾಮರಾ, ಧ್ವನಿವರ್ಧಕ, ಸ್ವಯಂ ಚಾಲಿತ ಬೆಲ್ ವ್ಯವಸ್ಥೆ, ಲ್ಯಾಪ್‌ಟಾಪ್, ನಿರಂತರ ವಿದ್ಯುತ್, ಯು.ಪಿ.ಎಸ್. ಇದು ಶಿವನಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸೌಲಭ್ಯ.
ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ, ಶಿಕ್ಷಕರ ಸಮರ್ಪಣಾ ಮನೋಭಾವ, ಪೋಷಕರ ಸಹಕಾರ, ಸಮುದಾಯದ ಸಹಭಾಗಿತ್ವದಿಂದ ತಾಲ್ಲೂಕಿನ ಶಿವನಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಎಲ್.ಕೆ.ಜಿ, ಯು.ಕೆ.ಜಿ ಮತ್ತು 1ರಿಂದ 7ನೇ ತರಗತಿವರೆಗೆ ಶಿಕ್ಷಣ ನೀಡುತ್ತಿದೆ. ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ 350 ವಿದ್ಯಾರ್ಥಿಗಳ ದಾಖಲಾತಿ, ಶಿಕ್ಷಕರ ಸೇವೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಸಾಕ್ಷೀಕರಿಸಿದೆ.
6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಎಂ.ಎಸ್, ಎಂ.ಎಸ್ ವರ್ಡ್ ಬಳಸಲು ಶಕ್ತರಾಗಿದ್ದಾರೆ. ದಾಖಲಾತಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಬಹುತೇಕ ಮಾಹಿತಿ ಗಣಕೀಕರಣಗೊಂಡಿದೆ ಎಂಬುದು ಗಮನಾರ್ಹ ವಿಷಯ.
‘ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಾಷಾ ವಿಷಯದಲ್ಲಿ ಹಿಂದುಳಿಯಬಾರದು. ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಸಾಧಿಸಬೇಕು. ಇದಕ್ಕೆ ಸಹಾಯಕವಾಗುವಂತೆ ಇಂಗ್ಲೀಷ್ ಭಾಷಾ ಕಲಿಕೆ, ವ್ಯಾಕರಣ ಕಲಿಸುತ್ತಿದ್ದೇನೆ’ ಎಂದು ಸ್ವ– ಆಸಕ್ತಿಯಿಂದ ತರಬೇತಿ ನೀಡುತ್ತಿರುವ ಸಿಆರ್‌ಪಿ ರಘುನಾಥ್ ತಿಳಿಸಿದರು.
ಶಾಲೆಯಲ್ಲಿ ‘ಸ್ಕೂಲ್ ಬ್ಯಾಂಕ್ ಆಫ್ ಶಿವನಿ’ ಆರಂಭಿಸಲಾಗಿದೆ. ವಿದ್ಯಾರ್ಥಿಗಳೇ ಹಣ ಜಮಾ ಅಥವಾ ಹಿಂಪಡೆಯಬಹುದು. ವ್ಯವಹಾರದ ಮಾಹಿತಿ ಪೋಷಕರ ಮೊಬೈಲ್‌ಗೆ ರವಾನೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಬ್ಯಾಂಕ್ ವ್ಯವಹಾರದ ಅರಿವು ಮೂಡಿಸುವ ಶಾಲೆಯ ಪ್ರಯತ್ನ ಉತ್ತಮವಾಗಿದೆ ಎಂದು ಪೋಷಕಿ ಭಾಗ್ಯಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ವಿದ್ಯಾರ್ಥಿಗಳ ಶಿಕ್ಷಣ, ಸುರಕ್ಷತೆಯ ದೃಷ್ಟಿಯಲ್ಲಿ 10 ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಿಂದಲೇ ವಿದ್ಯಾರ್ಥಿಗಳನ್ನು ವೀಕ್ಷಿಸಲು ಸಾಧ್ಯವಾಗುವಂತೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿ ನಿಯಂತ್ರಿಸಲು ಧ್ವನಿವರ್ಧಕ ಸ್ಥಾಪಿಸಲಾಗಿದೆ’ ಎಂದು ಪ್ರಭಾರ ಮುಖ್ಯ ಶಿಕ್ಷಕ ಜಿ.ಆರ್. ಮಂಜಪ್ಪ ತಿಳಿಸಿದರು.
ಸಮಾನ ಮನಸ್ಕ ಶಿಕ್ಷಕರು, ಉತ್ಸಾಹಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಆಸಕ್ತ ಪೋಷಕರಿಂದಾಗಿ ಶಾಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿಕೊಂಡಿರುವ ಶಾಲೆಯು ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಾ ಇತರ ಶಾಲೆಗಳಿಗೆ ಮಾದರಿಯಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಮಂಜೂರಾಗಿರುವ ಹುದ್ದೆಗಳಲ್ಲಿ 2 ಖಾಲಿಯಿವೆ. ಪ್ರಸ್ತುತ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ಇಲಾಖೆ ಈ ಬಗ್ಗೆ ಗಮನಹರಿಸಬೇಕುಮಧು ಎಸ್‌ಡಿಎಂಸಿ ಅಧ್ಯಕ್ಷ
ಶಿವನಿ ಕೆಪಿಎಸ್ ಶಾಲೆಯಲ್ಲಿ ಕನ್ನಡ ಇಂಗ್ಲೀಷ್ ಮಾಧ್ಯಮ ಇದೆ. ನುರಿತ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಇದು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮೈಲುಗಲ್ಲಾಗಿದೆಪರುಷರಾಮಪ್ಪ ಬಿಇಒ ತರೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.