ಚಿಕ್ಕಮಗಳೂರು: 2025–26ನೇ ಸಾಲಿನ ಕೇಂದ್ರ ವಲಯ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರಿಕೆ ನಿರ್ದೇಶನಾಲಯದಿಂದ ಗುರಿಗಳನ್ನು ಜಿಲ್ಲಾವಾರು ಹಂಚಿಕೆ ಮಾಡಿದ್ದು, ಘಟಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮೀನು ಕೃಷಿ ಕೊಳ ನಿರ್ಮಾಣವೂ ಸೇರಿದೆ. ರಾಜ್ಯ ವಲಯದ ಯೋಜನೆಯಡಿಯಲ್ಲಿ 2024–25ನೇ ಸಾಲಿಗೆ ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದ್ದು, ಚಿಕ್ಕಮಗಳೂರು-25, ಮೂಡಿಗೆರೆ-25, ಕಡೂರು-25, ತರೀಕೆರೆ-25 ಮತ್ತು ಶೃಂಗೇರಿಗೆ–25 ಮನೆಗಳನ್ನು ಮಂಜೂರು ಮಾಡಲಾಗಿದೆ. ಆಸಕ್ತ ಮೀನುಗಾರರು ಅರ್ಜಿ ಸಲ್ಲಿಸಬಹುದು.
ಮೀನುಗಾರಿಕೆ ಸಲಕರಣೆ ಕಿಟ್ ವಿತರಣೆ ಯೋಜನೆಯಡಿ ಪರಿಶಿಷ್ಟ ಜಾತಿ-10, ಪ.ಪಂಗಡ-4 ಮತ್ತು ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಯೋಜನೆಯಡಿ ದ್ವಿಚಕ್ರ ವಾಹನ ಖರೀದಿಗೆ 20 ಮೀನುಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಮೇ 28ರ ಒಳಗೆ ಅಯಾ ತಾಲ್ಲೂಕುಗಳ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು (ಚಿಕ್ಕಮಗಳೂರು-ಮೂಡಿಗೆರೆ ಮೊ.948050325), ಕಡೂರು ಮೊ. 9972128552, ತರೀಕೆರೆ (ಮೊ. 9449363007), ನರಸಿಂಹರಾಜಪುರ/ಕೊಪ್ಪ/ಶೃಂಗೇರಿ ರೂ. 7411174772) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
––
ಕಾಟ ಕೊಟ್ಟಿದ್ದ ಮರಿಯಾನೆ ಸೆರೆ
ಆಲ್ದೂರು: ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟು ಒಂಟಿಯಾಗಿ ಉಪಟಳ ನೀಡುತ್ತಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಸೆರೆ ಹಡಿದಿದೆ. ಆಲ್ದೂರು ಹಾಂದಿ ಸತ್ತಿಹಳ್ಳಿ ಗುಲ್ಲನ್ ಪೇಟೆ ತೋಳೂರು ಕಡೆಗಳಲ್ಲಿ ಸಂಚರಿಸಿ ಕಾಫಿ ಮತ್ತು ಇತರ ಬೆಳೆಗಳನ್ನು ಹಾನಿ ಮಾಡುತ್ತಿತ್ತು. ಭೀಮ ಏಕಲವ್ಯ ತಂಜನ್ ಮಹೇಂದ್ರ ಧನಂಜಯ ಸೇರಿ ಕುಮ್ಕಿ ಆನೆಗಳ ತಂಡವನ್ನು ಕರೆಸಿ ಮರಿಯಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸೋಮವಾರ ಹಾಂದಿ ಸಮೀಪದ ಬೃಹನ್ಮಠದ ಬಳಿ ಆನೆ ಸೆರೆ ಹಿಡಿಯಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಮಾತನಾಡಿ ‘ಸೆರೆ ಹಿಡಿದಿರುವ ಮರಿಯನ್ನು ಕೆಳಗೂರಿನಲ್ಲಿ ರಚಿಸಿರುವ ಆನೆಗಳ ಶಿಬಿರದಲ್ಲಿ ಇರಿಸಲಾಗುವುದು. ಮಂಗಳವಾರ ಆನೆಯನ್ನು ಸ್ಥಳಾಂತರ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.