ನರಸಿಂಹರಾಜಪುರ: ಕ್ಷೇತ್ರದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ಬೆಳೆ ನಷ್ಟವಾಗಿದ್ದರೂ ಸರ್ಕಾರ ಕ್ಷೇತ್ರದ ಮೂರು ತಾಲ್ಲೂಕುಗಳನ್ನು ಅತಿವೃಷ್ಟಿ ತಾಲ್ಲೂಕುಗಳು ಎಂದು ಘೋಷಿಸಿಲ್ಲ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಅರುಣ್ ಕುಮಾರ್ ಆರೋಪಿಸಿದರು.
ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮಳೆ ಅಧಿಕವಾಗಿ ಬೆಳೆ ನಷ್ಟವಾಗಿದ್ದರೂ ಪರಿಹಾರ ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ನೂರಾರು ಎಕರೆ ತೆರವು ಮಾಡಲು ಸಹಕಾರಿ ನೀಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ರೈತರ ತಲೆ ಮೇಲೆ ಕತ್ತಿ ಇಟ್ಟಿದ್ದು, ಯಾವಾಗ ಬೇಕಾದರೂ ಸಮಸ್ಯೆಯಾಗಬಹುದು ಎಂದರು.
2023ರ ಚುನಾವಣೆಯಲ್ಲಿ ರಾಜೇಗೌಡರು ಗೆದ್ದಿದ್ದು ಕೇವಲ 200 ಮತಗಳ ಅಂತರದಿಂದ. ಅಂಚೆಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ಜೀವರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸುವಂತೆ ಶಾಸಕರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿತ್ತು. ಸುಪ್ರೀಂ ಕೋರ್ಟ್ ತೀರ್ಮಾನದಿಂದ ಶಾಸಕರು ಗಡಿಬಿಡಿಯಾಗಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಓಡಾಡುತ್ತಿದ್ದಾರೆ ಎಂದು ಹೇಳಿದರು.
ವಾಹನ ಇಟ್ಟುಕೊಂಡವರ ಪಡಿತರ ಚೀಟಿಯನ್ನು ವಜಾ ಮಾಡಿ, ಇದುವರೆಗೆ ಪಡೆದಿರುವ ಪಡಿತರದ ಮೊತ್ತ ಪಾವತಿಸಬೇಕೆಂದು ಪಡಿತರ ಚೀಟಿದಾದರರಿಗೆ ಸರ್ಕಾರ ನೋಟಿಸ್ ನೀಡಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಮತ್ತು ಈ ಬಗ್ಗೆ ಹೋರಾಟ ನಡೆಸಲಿದೆ ಎಂದರು.
ಮುಖಂಡರಾದ ಕೆಸವೆ ಮಂಜುನಾಥ್, ಲೋಕೇಶ್, ಎನ್.ಎಂ.ಕಾಂತರಾಜ್, ಫರ್ವಿಜ್, ರಾಜೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.